Infinite Thoughts

Thoughts beyond imagination

ನರಸಿಂಹ ಜಯಂತಿ ಶುಭಾಶಯಗಳು!

ಇಂದು ನರಸಿಂಹ ಜಯಂತಿ ಆಚರಿಸೋಣ... 
ಪ್ರಪಂಚವನ್ನಾವರಿಸಿರುವ ದುಷ್ಟಶಕ್ತಿಯ ಸಂಹಾರವಾಗಲೆಂದು ಹಾರೈಸೋಣ... 
 
ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಭಗವಾನ್ ವಿಷ್ಣು ತನ್ನ ಭಕ್ತರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸಲೆಂದೇ ನರಸಿಂಹಾವತಾರವನ್ನು ತಳೆದ. ಹಾಗಾಗಿಯೇ ದೇವರು ಅರ್ಧ ಮನುಷ್ಯ ಅರ್ಧ ಸಿಂಹದ ರೂಪದಲ್ಲಿ ರೌದ್ರಾವತಾರ ತಾಳಿ ಉಗ್ರನರಸಿಂಹನಾಗಿ ಅವತರಿಸಿದ ಈ ದಿನವನ್ನು ಹಿಂದೂ ಬಾಂಧವರೆಲ್ಲರೂ ನರಸಿಂಹ ಜಯಂತಿಯನ್ನಾಗಿ ಆಚರಿಸುತ್ತಾರೆ... ದುಷ್ಟಶಕ್ತಿಯ ದಮನಕ್ಕಾಗಿ  ಅಂದು ಉಗ್ರಾವತಾರವೆತ್ತಿ ಭಗವಾನ್ ಶ್ರೀ ವಿಷ್ಣು  ಹೇಗೆ ಮನುಕುಲವನ್ನು ಗಂಡಾಂತರದಿಂದ ಕಾಪಾಡಿದನೋ ಅದೇ ರೀತಿ ಈಗ ಮನುಕುಲಕ್ಕೆ ಭೀಕರ ಸಂಕಷ್ಟ ಬಂದೆರಗಿರುವ ಸಂದರ್ಭದಲ್ಲಿ ಭಗವಾನ್ ವಿಷ್ಣು ತನ್ನ ಉಗ್ರ ರೂಪವನ್ನು ಪ್ರಕಟಿಸಿ ದುಷ್ಟ ಸಂಹಾರ ಮಾಡಲಿ ಅಂತ ಪ್ರಾರ್ಥಿಸೋಣ, ಮತ್ತು ಹಾರೈಸೋಣ... 
 
ಅಂದ ಹಾಗೆ ಜಗತ್ತಿನ ಅತ್ಯಂತ ಪ್ರಾಚೀನವಾದ ಮತ್ತು ಮೊತ್ತ ಮೊದಲ ನರಸಿಂಹಸ್ವಾಮಿ ದೇವಾಲಯ ಇವತ್ತಿನ ಪಾಕಿಸ್ತಾನದ ಮುಲ್ತಾನ್ ಪಟ್ಟಣದಲ್ಲಿ ಇದೆ ಮತ್ತು ಅದನ್ನು ಸ್ವತಹಾ ಹಿರಣ್ಯಕಶಿಪುವಿನ ಮಗ ಪ್ರಹಲ್ಲಾದನೆ ಕಟ್ಟಿಸಿದ್ದು ಎಂಬ ಪ್ರತೀತಿಯೂ ಇದೆ... ದಂತಕಥೆಗಳೇನೇ ಇರಲಿ, ಆದರೆ ಈ ಪ್ರದೇಶಕ್ಕೆ ಪ್ರಹಲ್ಲಾದಪುರಿ  ಎಂಬ ಹೆಸರು ಇದ್ದದ್ದಕ್ಕೆ, ಅಲ್ಲಿ ದೇವಾಲಯ ಇದ್ದದಕ್ಕೆ ಗ್ರೀಕರಿಂದ ಹಿಡಿದು, ಅರಬ್ಬರ, ಚೀನೀಯರ ಮತ್ತು ಬ್ರಿಟಿಷರ ದಾಖಲೆಗಳೂ ಇವೆ... ಮುಸ್ಲಿಮರ ದಾಳಿಗೆ ಒಳಗಾಗಿ ಈ ನರಸಿಂಹ ದೇವಾಲಯ ಮುಲ್ತಾನಿನ ಇನ್ನೊಂದು ಪ್ರಖ್ಯಾತ ಸೂರ್ಯ ದೇವಾಲಯದಂತೆಯೇ ನಾಶವಾಯಿತು... ಅದರ ಪಕ್ಕದಲ್ಲೇ ಬಹಾವುದ್ದೀನ್ ಝಕಾರಿಯಾ ಎಂಬ ಹೆಸರಿನ ಮುಸ್ಲಿಂ ಸಂತನ ಸ್ಮಾರಕವಾಗಿ ಒಂದು ಮಸೀದಿ ತಲೆ ಎತ್ತಿತು.
 
ಬಳಿಕ ಕಾಲಾಂತರದಲ್ಲಿ ಈ ಪ್ರದೇಶ ಸಿಖ್ಖರ ಆಳ್ವಿಕೆಗೊಳಪಟ್ಟಾಗ ಪ್ರಹಲ್ಲಾದಪುರಿಯ ಈ ನರಸಿಂಹ ದೇವಸ್ಥಾನವೂ ಮತ್ತೆ ಎದ್ದು ನಿಂತಿತು. ಹಿಂದೂ ಗಳೆಲ್ಲ ವಂತಿಗೆ ಸಂಗ್ರಹಿಸಿ ಧ್ವಂಸವಾದ ದೇವಾಲಯವನ್ನು ಮತ್ತೆ ಅಂದಾಜು ೧೮೧೦ರಲ್ಲಿ ಪುನರ್ ನಿರ್ಮಿಸಿದರು. ಆದರೆ ಆ ಬಳಿಕ ೧೮೪೯ರಲ್ಲಿ ಬ್ರಿಟಿಷ್ ಸೇನಾ ಪಡೆಗಳು ,ಮುಲ್ತಾನನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಸುಡುಮದ್ದು ಸಂಗ್ರಹಾಗಾರವೇ ಸ್ಫೋಟಿಸಿ ಮುಲ್ತಾನ್ ಕೋಟೆಯ ಒಳಗೆಯೇ ಇದ್ದ ಈ ನರಸಿಂಹ ಸ್ವಾಮಿ ದೇವಾಲಯವೂ ಮತ್ತೊಮ್ಮೆ ನಾಶವಾಯಿತು. ಆ ಬಳಿಕ ೧೮೬೧ರಲ್ಲಿ ದೇವಾಲಯದ ಮಹಾಂತ ಭವಲ್ ರಾಮ್ ದಾಸ್ ಅನ್ನುವವರು ಅಲ್ಲಿನ ಹಿಂದೂಗಳ ಧನ ಸಹಾಯದಿಂದ ಆಗಿನ ಕಾಲದಲ್ಲಿ ರೂ ೧೧,೦೦೦ ಸಂಗ್ರಹಿಸಿ ದೇವಾಲಯದ  ಪುನರ್ನಿರ್ಮಾಣ ಮಾಡಿದರು. ೧೮೭೨ರಲ್ಲಿ ಮತ್ತೊಮ್ಮೆ ದೇವಾಲಯದ ನವೀಕರಣ ಆಯಿತು. 
 
ಇದಾದ ಬಳಿಕ ೧೮೮೧ ರಲ್ಲಿ ಪ್ರಹಲ್ಲಾದಪುರಿಯ ಈ ನರಸಿಂಹಸ್ವಾಮಿ ದೇವಾಲಯಕ್ಕೆ ಒಂದು ದೊಡ್ಡ ಗೋಪುರವನ್ನು ಅಲ್ಲಿನ ಹಿದೂ ಭಕ್ತರು ನಿರ್ಮಾಣ ಮಾಡಿದರು. ಆಗ ಆ ಗೋಪುರ ಪಕ್ಕದ ಮಸೀದಿಗಿಂತ ಎತ್ತರ ಇದೆ ಅಂತ ಮುಸ್ಲಿಮರು ಕ್ಯಾತೆ ತೆಗೆದರು. ಅದಕ್ಕೆ ಪ್ರತಿಯಾಗಿ ಮುಲ್ತಾನ್ ಪಟ್ಟಣದಲ್ಲಿ ಅವ್ಯಾಹತವಾಗಿ ಮಾರಾಟವಾಗುತ್ತಿದ್ದ ಗೋಮಾಂಸದ ವಿರುದ್ಧ ಹಿಂದೂಗಳು ಪ್ರತಿಭಟನೆ ಮಾಡಿದರು. ಇದರಿಂದಾಗಿ ೧೮೮೧ ರ ಎಪ್ಟೆಂಬರ್ ೨೦ ನೇ ತಾರೀಕಿಗೆ ಮುಲ್ತಾನಿನಲ್ಲಿ ಭಾರೀ ಕೋಮು ಹಿಂಸಾಚಾರ ನಡೆಯಿತು. ಹಿಂದೂಗಳು ಮಸೀದಿಯನ್ನೂ ಖುರಾನನ್ನೂ ಸುಟ್ಟರು, ಮುಸ್ಲಿಮರು ಪ್ರಹಲ್ಲಾದಪುರಿಯ ನರಸಿಂಹಸ್ವಾಮಿ ದೇವಾಲಯವನ್ನು ಸುಟ್ಟುಹಾಕಿದರು... 
 
ಈಗ ಮತ್ತೊಮ್ಮೆ ಮುಲ್ತಾನಿನ ಹಿಂದೂ ಬಾಂಧವರು ಚಂದಾ ಎತ್ತಿ , ಮತ್ತೊಮ್ಮೆ ದೇವಳವನ್ನು ಪುನರ್ನಿರ್ಮಾಣ ಮಾಡಿದರು. ಬಳಿಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ದೇಶ ವಿಭಜನೆಯೂ ಆಗಿ, ಮುಲ್ತಾನ್ ಪಟ್ಟಣ ಪಾಕಿಸ್ತಾನಕ್ಕೆ ಸೇರಿದುದರಿಂದ ಅಲ್ಲಿನ ಬಹುತೇಕ ಹಿಂದೂಗಳು ತಮ್ಮ ಆಸ್ತಿಪಾಸ್ತಿಗಳನ್ನೆಲ್ಲಾ ತೊರೆದು ಭಾರತಕ್ಕೆ ಬಂದರು. ಆ ಸಮಯದಲ್ಲಿ ದೇವಾಲಯದ ಮಹಾಂತರಾಗಿದ್ದ ಬಾಬಾ ನಾರಾಯಣ್ ದಾಸ್ ಬಾತ್ರಾ ಎಂಬವರು ಅಲ್ಲಿನ ಮೂಲ ನರಸಿಂಹಸ್ವಾಮಿ ವಿಗ್ರಹವನ್ನು ತಮ್ಮೊಂದಿಗೆಯೇ ಭಾರತಕ್ಕೆ ತಂದು ಅದನ್ನು ಹರಿದ್ವಾರದಲ್ಲಿ ಪ್ರತಿಷ್ಠಾಪಿಸಿದರು... ಅಂದಹಾಗೆ ಮುಲ್ತಾನ್ ಎಂಬ ಹೆಸರು ಬರಲಿಕ್ಕೆ ಕಾರಣವೆ ಅದು ನರಸಿಂಹಸ್ವಾಮಿಯ ಮೂಲಸ್ಥಾನ ಎಂಬುದಕ್ಕೆ. ಸಂಸ್ಕೃತ "ಮೂಲಸ್ಥಾನ" ಎಂಬ ಪದವೇ ಕಾಲಾಂತರದಲ್ಲಿ ಮುಲ್ತಾನ್ ಎಂದಾಯಿತು! 
 
ನರಸಿಂಹಸ್ವಾಮಿಗೆ ಸಿಖ್  ಧರ್ಮದಲ್ಲಿಯೂ ಬಹಳ ಪ್ರಮುಖ ಸ್ಥಾನವಿದೆ. ಸಿಖ್ಖರು ಭಗತ್ ಪ್ರಲ್ಲಾದ್ ಅಂತ ಭಕ್ತ ಪ್ರಹಲ್ಲಾದನನ್ನು ಕರೆಯುತ್ತಾರೆ..! ಅದೇ ರೀತಿ ಹಿರಣ್ಯಕಶಿಪುವನ್ನು "ಹರ್ನಾಕ್ಷ್" ಅಂತ ಸಂಬೋಧಿಸುತ್ತಾರೆ..! ನರಸಿಂಹ ಎಂಬ ಹೆಸರನ್ನು "ನರಸಿಂಗ್" ಅಂತ ಕರೆಯುತ್ತಾರೆ. ನರಸಿಂಹಾವತಾರದ ಕತೆ ಸಿಖ್ಖರ ಪವಿತ್ರ ಗ್ರಂಥ 'ಗುರ್ಬಾನಿ'(ಗುರುವಾಣಿ) ಯಲ್ಲೂ  ಬರುತ್ತದೆ. 
 
ಉತ್ತರ ಭಾರತೀಯರಲ್ಲಿಯೇ ಅತೀ ಹೆಚ್ಚು ಪ್ರಚಲಿತದಲ್ಲಿರುವ ಹೋಳಿ ಹಬ್ಬಕ್ಕೂ ನರಸಿಂಹಾವತಾರದ ಪುರಾಣಕ್ಕೂ ನೇರಾನೇರ ಸಂಬಂಧವಿದೆ. ಹೋಲಿಕಾ ಹಿರಣ್ಯಕಶಿಪುವಿನ ಸಹೋದರಿ. ಬಾಲಕ ಪ್ರಹಲ್ಲಾದನನ್ನು ಜೀವಂತ ಸುಡಲು ಪ್ರಯತ್ನಿಸಿ ತಾನೇ ದಹನವಾದವಳು. ಈ ಹಿನ್ನೆಲೆಯಲ್ಲಿಯೇ ಹೋಳೀಹಬ್ಬವನ್ನು ಆಚರಿಸುತ್ತಾರೆ. ನರಸಿಂಹ ಸ್ವಾಮಿಯ ಆರಾಧನೆಯನ್ನು ಉತ್ತರ ಭಾರತೀಯರ ಬಹಳ ಭಕ್ತಿಯಿಂದ ಮಾಡುತ್ತಾರೆ. ಭಗವಾನ್  ನರಸಿಂಹ ಸ್ವಾಮಿಯನ್ನು ಈಗ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪೂಜಿಸುತ್ತಿದ್ದಾರೆ. ನರಸಿಂಹ  ಜಯಂತಿಯನ್ನು ವಿದೇಶೀಯರೂ ಆಚರಿಸುತ್ತಿದ್ದಾರೆ. ನರಸಿಂವಾತಾರವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ್ದು ಇಸ್ಕಾನ್. 
 
ಅಂದ ಹಾಗೆ ಸಿಂಹದ ಮುಖ ಮನುಷ್ಯನ ದೇಶ ಹೊಂದಿರುವ ನರಸಿಂಹಾವತಾರದ ಪರಿಕಲ್ಪನೆಯನ್ನೇ ಹೋಲುವ ಸುಮಾರು ನಲವತ್ತು ಸಾವಿರ ವರ್ಷಗಳಷ್ಟು ಹಳೆಯ ದಂತದಲ್ಲಿ ಕೆತ್ತಲ್ಪಟ್ಟ ಮೂರ್ತಿಯೊಂದು ದಕ್ಷಿಣ ಜರ್ಮನಿಯ  Hohlenstein ಎಂಬಲ್ಲಿಯ Stadelholಎಂಬ ಪುರಾತನ ಹಳೆಯ ಶಿಲಾಯುಗದ ಗುಹೆಯಲ್ಲಿ ೧೯೩೯ರಲ್ಲಿಯೇ ಪತ್ತೆಯಾಗಿತ್ತು. ಹಲವಾರು  ಚೂರುಗಳಾಗಿದ್ದ ಆ ಮೂರ್ತಿಯ ಬೇರೆ ಬೇರೆ ಭಾಗಗಳು ಹಲವಾರು ಉತ್ಖನನಗಳಲ್ಲಿ ಪತ್ತೆಯಾಗಿ ೨೦೦೯ ರಲ್ಲಿ ಇನ್ನಷ್ಟು ಭಾಗಗಳು ಪತ್ತೆಯಾಗಿ ಅದನ್ನು ಜೋಡಿಸಿ ನೋಡಿದರೆ ಶೇಕಡಾ ಎಪ್ಪತ್ತರಷ್ಟು ಮೂರ್ತಿ ಸಿದ್ಧವಾಯಿತು. ಹೀಗೆ ಸಿಂಹದ ಮುಖ ಮನುಷ್ಯನ ದೇಹ ಹೊಂದಿರುವ ಈ ದಂತದ ಮೂರ್ತಿ ಬಹುಶಃ ನರಸಿಂಹ ದೇವರ ಅತ್ಯಂತ ಪ್ರಾಚೀನ ಮೂರ್ತಿಎಂಬ ಒಂದು ವಾದವೂ ಇದೆ. 
 
ಅದೆಲ್ಲ ಇರಲಿ. ಈ ಬಾರಿಯ ನರಸಿಂಹ ಜಯಂತಿ ಒಂದು ಅತ್ಯಂತ ಗಂಭೀರವಾದ, ಇಡೀ ಪ್ರಪಂಚವೇ ದಾರುಣವಾದ ವಿಷಮ ಪರಿಸ್ಥಿತಿಯನ್ನೆದುರಿಸುತ್ತಿರುವ ಸಂದರ್ಭದಲ್ಲಿ ಬಂದಿದೆ. ಆಸ್ತಿಕ ಹಿಂದೂ ಬಾಂಧವರ ಮನದಲ್ಲಿ ಒಂದು ಹೊಸ ಆಶಾಕಿರಣದಂತೆ ಈ ಸುದಿನ ಒದಗಿ ಬಂದಿದೆ. ದುಷ್ಟ ಸಂಹಾರಕ್ಕಾಗಿಯೇ ಅತ್ಯಂತ ಉಗ್ರಾವತಾರ ತಾಳಿ ನರಸಿಂಹನಾಗಿ ಅವತರಿಸಿದ ವಿಷ್ಣು ಹಿರಣ್ಯಕಶಿಪು ಎಂಬ ದುಷ್ಟನ ನಿವಾರಿಸಿ ಲೋಕಕ್ಕೆ ಕಲ್ಯಾಣವುಂಟುಮಾಡಿದ ರೀತಿಯಲ್ಲೇ ಈ ನರಸಿಂಹ ಜಯಂತಿಯ ಸಂದರ್ಭದಲ್ಲಿ ಈ ಭಾರೀ ಗಂಡಾಂತರದಿಂದ ಮನುಕುಲವನ್ನು ಪಾರುಮಾಡಿ ಎಲ್ಲರಿಗೂ ಒಳ್ಳ್ಳೆಯದನ್ನು ಮಾಡಲೆಂದು ಪ್ರಾರ್ಥಿಸೋಣ.... ಪ್ರಪಂಚವನ್ನಾವರಿಸಿರುವ ದುಷ್ಟಶಕ್ತಿಯ ಸಂಹಾರವಾಗಲೆಂದು ಹಾರೈಸೋಣ... 



Related posts