ತಾಯಿ ಭಾರತಿ ವೀರಪುತ್ರನನ್ನು ಹಡೆದ ಹೆಮ್ಮೆಯ ದಿನ - ವೀರಾಗ್ರಣಿ ವಿನಾಯಕ ಸಾವರ್ಕರ್ ಜನಿಸಿದ ದಿನ
ತಾಯಿ ಭಾರತಿ ವೀರಪುತ್ರನನ್ನು ಹಡೆದ ಹೆಮ್ಮೆಯ ದಿನ - ವೀರಾಗ್ರಣಿ ವಿನಾಯಕ ಸಾವರ್ಕರ್ ಜನಿಸಿದ ದಿನ
ಇವತ್ತಿಗೆ ಸರಿಯಾಗಿ ನೂರಾಮೂವತ್ತೇಳು ವರ್ಷಗಳ ಹಿಂದೆ, ಅಂದರೆ ೧೮೮೩ ನೇ ಇಸವಿಯ ಮೇ ೨೮ನೆಯ ತಾರೀಕು ಭಾರತ ಮಾತೆ ವಿನಾಯಕ ದಾಮೋದರ ಸಾವರ್ಕರ್ ಎಂಬ ವೀರಪುತ್ರನಿಗೆ ಜನ್ಮ ನೀಡಿದಳು. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದು ೨೬ ವರ್ಷಗಳಾಗಿತ್ತು. ಸಾವರ್ಕರ್ ಬಾಲ್ಯದ ದಿನಗಳಲ್ಲಿ ಭಾರತ ಬ್ರಿಟಿಷರ ಕರಾಳ ಆಳ್ವಿಕೆಯಿಂದ ಮುಕ್ತವಾಗಬೇಕಿದ್ದರೆ ಸಶಸ್ತ್ರ ಕ್ರಾಂತಿಯೊಂದೇ ದಾರಿ ಎಂಬನಂಬಿಕೆ ಬಲವಾಗಿತ್ತು. ಸಾವರ್ಕರ್ ಯೌವನಾವಸ್ಥೆಗೆ ಕಾಲಿಡುತ್ತಿದ್ದಂತೆಯೇ ಬಾಲಗಂಗಾಧರ ತಿಲಕ, ಲಾಲಾ ಲಜಪತ ರಾಯ್, ಬಿಪಿನ್ ಚಂದ್ರ ಪಾಲ್ ರಂಥ ಉಗ್ರ ಸ್ವಾತಂತ್ರ್ಯ ಸೇನಾನಿಗಳು ಸ್ವದೇಶೀ ಕ್ರಾಂತಿಯ ಕಹಳೆ ಮೊಳಗಿಸುತ್ತಿದ್ದರು.
ಸಾವರ್ಕರ್ ಕೂಡಾ ೧೯೦೫ರಲ್ಲಿಯೇ ವಿದೇಶೀ ವಸ್ತುಗಳನ್ನು ಬಹಿಷ್ಕರಿಸುವ ಆಂದೋಲನ ಪ್ರಾರಂಭಿಸಿದ್ದರು. ಬ್ರಿಟಿಷರ ವಿರುದ್ಧ ಸೆಟೆದೆದ್ದ ಸಾವರ್ಕರ್, ಅವರ ಕುಟಿಲ ನೀತಿಯ ವಿರುದ್ಧ ಹೋರಾಡಲು ನೇರವಾಗಿ ಅವರ ದೇಶಕ್ಕೇ ಹೋಗಿ, ಅವರ ರಾಜಧಾನಿಯಲ್ಲಿಯೇ ಭಾರತದ ಸ್ವಾತಂತ್ರ್ಯ ಹೋರಾಟ ರೂಪಿಸಬೇಕೆಂಬ ಛಲದಿಂದ ಇಂಗ್ಲೆಂಡಿಗೇ ಹೋದರು. ಅಲ್ಲಿ ಆಗಲೇ ಭಾರತೀಯ ವಿದ್ಯಾರ್ಥಿಗಳನ್ನು ಸಂಘಟಿಸಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬ್ರಿಟಿಷ್ ನೆಲದಲ್ಲೇ ಅಸ್ತಿಭಾರ ಹಾಕಿದ್ದ, ಮತ್ತು ಅದಕ್ಕಾಗಿಯೇ ಇಂಡಿಯಾ ಹೌಸ್ ಎಂಬ ಕೇಂದ್ರವನ್ನೂ ತೆರೆದಿದ್ದ ಶ್ಯಾಮಜಿ ಕೃಷ್ಣ ವರ್ಮಾ ಅವರಲ್ಲಿಗೆ ತೆರಳಿದರು. ವೀರ ಸಾವರ್ಕರ್ ಅವರು ಬ್ರಿಟಿಷರ ನೆಲಕ್ಕೆ ಕಾಲಿಟ್ಟದ್ದು ೧೯೦೬ ನೇ ಇಸವಿಯಲ್ಲಿ. ಅಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದುಕೊಂಡೇ ೧೮೫೭ರ ಸಿಪಾಯಿ ದಂಗೆಯ ಬಗ್ಗೆ ಅಧ್ಯಯನ ನಡೆಸಿ, ಆ ಬಗ್ಗೆ "ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ" ಎಂಬ ತಮ್ಮ ಈ ಪುಸ್ತಕದಲ್ಲಿ ಹಿಂದೆ ಉಪಯೋಗಿಸಲಾಗುತ್ತಿದ್ದ ಗೆರಿಲ್ಲಾ ಯುದ್ಧ ತಂತ್ರಗಳನ್ನು ಸವಿವರವಾಗಿ ಬರೆದು ಆ ಮೂಲಕ ಭಾರತೀಯ ಯುವ ಸಮುದ್ದಯದಲ್ಲಿ ಸ್ವಾತಂತ್ರ್ಯ ಕ್ರಾಂತಿಯ ಕಿಡಿ ಹಚ್ಚಿದ ಸಾವರ್ಕರ್ ಬಗ್ಗೆ ಬ್ರಿಟಿಷ್ ಗೂಢಾಚಾರರು ಕಣ್ಣಿಟ್ಟಿದ್ದರು.
ವೀರ ಸಾವರ್ಕರ್ ಅಲ್ಪಕಾಲದಲ್ಲೇ ಇಂಗ್ಲೆಂಡ್ ನಲ್ಲಿದ್ದ ಭಾರತೀಯ ವಿದ್ಯಾರ್ಥಿ ಸಮುದಾಯದ ಪೈಕಿ ಬಹಳ ಜನಪ್ರಿಯರಾದರು. ಇಂಡಿಯಾ ಹೌಸ್ ನಲ್ಲಿ ಸಂಘಟಿರಾಗುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ನಾಯಕರಾಗಿ, ಶ್ಯಾಮಜಿ ಕೃಷ್ಣ ವರ್ಮಾ ಅವರ ಉತ್ತರಾಧಿಕಾರಿಯೆಂದೇ ಬಿಂಬಿಸಲ್ಪಟ್ಟರು. "ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ" ಎಂಬ ತಮ್ಮ ಈ ಪುಸ್ತಕದಳ್ಳಿ ಹಿಂದೆ ಉಪಯೋಗಿಸಲಾಗುತ್ತಿದ್ದ ಗೆರಿಲ್ಲಾ ಯುದ್ಧ ತಂತ್ರಗಳನ್ನು ಸವಿವರವಾಗಿ ಬರೆದು ಆ ಮೂಲಕ ಭಾರತೀಯ ಯುವ ಸಮುದ್ದಯದಲ್ಲಿ ಸ್ವಾತಂತ್ರ್ಯ ಕ್ರಾಂತಿಯ ಕಿಡಿ ಹಚ್ಚಿದ ಸಾವರ್ಕರ್ ಬಗ್ಗೆ ಬ್ರಿಟಿಷ್ ಗೂಢಾಚಾರರು ಕಣ್ಣಿಟ್ಟಿದ್ದರು. ಭಾರತದಲ್ಲಿದ್ದ ಅವರ ಸಹೋದರ ಗಣೇಶ್ ಸಾವರಕರ್ ಕ್ರಾಂತಿಕಾರೀ ಹೋರಾಟದಲ್ಲಿ ತೊಡಗಿಸಿಕೊಂಡಿರುವುದನ್ನೇ ನೆಪವಾಗಿರಿಸಿ ಇಂಗ್ಲೆಂಡಿನಲ್ಲಿದ್ದ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಬ್ರಿಟಿಷರು ಬಂಧಿಸಿದರು.
ಸಾವರ್ಕರ್ ಅವರನ್ನು ಬಂಧಿಸಿ ಬ್ರಿಟಿಷರು ಭಾರತಕ್ಕೆ ಹಡಗಿನಲ್ಲಿ ಕರೆದೊಯ್ಯುತ್ತಿದ್ದಾಗ , ವೀರ ಸಾವರ್ಕರ್ ಮಾರ್ಗ ಮಧ್ಯದಲ್ಲಿ ಫ್ರೆಂಚ್ ದ್ವೀಪ ಮಾರ್ಸೆಲಿಸ್ ನಲ್ಲಿನ ಹತ್ತಿರ ೧೯೧೦ ಜುಲೈ ೮ನೆಯ ತಾರೀಕಿಗೆ ಬೆಳಗಿನ ಜಾವ ಸಮುದ್ರಕ್ಕೆಹಾರಿ, ಈಜಿ ದಡ ಸೇರಿ ಬ್ರಿಟಿಷರಿಂದ ತಪ್ಪಿಸಿಕೊಂಡರು. ಆದ್ರೆ ಫ್ರೆಂಚ್ ಅಧಿಕಾರಿಗಳು ದುರಾದೃಷ್ಟವಶಾತ್ ಇವರನ್ನು ಮತ್ತೆ ಬ್ರಿಟಿಷರ ಸುಪರ್ದಿಗೆ ಒಪ್ಪಿಸಿದರು. ಭಾರತದಲ್ಲಿ ಸಾವರಕರರ ವಿಚಾರಣೆ ನಡೆಸಿದ ಬ್ರಿಟಿಷರು ೧೯೧೧ ರಲ್ಲಿ ಅವರಿಗೆ ಒಂದೇ ಬಾರಿಗೆ ಎರಡು ಜೀವಾವಧಿ ಶಿಕ್ಷೆಗಳನ್ನು ನೀಡಿದರು...! ೨೫ ವರ್ಷಗಳ ಅವಧಿಯ ಎರಡು ಜೀವಾವಧಿ... ಅಂದರೆ ಭರ್ತಿ ಐವತ್ತು ವರ್ಷಗಳ ಶಿಕ್ಷೆ..! ಅದು ಕೂಡಾ ಭಾರತದಿಂದ ೧೬೪೬ ಕಿಲೋಮೀಟರ್ ದೂರದ ಅಂಡಮಾನ್ ದ್ವೀಪದಲ್ಲಿದ್ದ ಸೆಲ್ಲ್ಯೂಲರ್ ಜೈಲಿನಲ್ಲಿ.... ಆಗ ವೀರ ಸಾವರ್ಕರ್ ಗೆ ಕೇವಲ ೨೮ ವರ್ಷ ವಯಸ್ಸು...! ಆಗ ಗಾಂಧೀಜಿ ಇನ್ನೂ ಆಫ್ರಿಕಾದಿಂದ ಭಾರತಕ್ಕೆ ಕಾಲಿಟ್ಟಿರಲಿಲ್ಲ... ಇನ್ನೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯ ಹೆಸರನ್ನು ಯಾರೂ ಕೇಳಿಯೇ ಇರಲಿಲ್ಲ... ಆಗಲೇ ವೀರ ಸಾವರ್ಕರ್ ಅವರನ್ನು ಕಂಡರೆ ಬ್ರಿಟಿಷ ಸಾಮ್ರಾಜ್ಯ ಶಾಹಿಗೆ ಅಷ್ಟೊಂದು ಹೆದರಿಕೆ ಯಾಕಿತ್ತು..? ೫೦ ವರ್ಷಗಳ ಕಾಲ ಶಿಕ್ಷೆ ಯಾಕೆ ವಿಧಿಸಿದರು ..? ಇದೊಂದರಲ್ಲೇ ವಿನಾಯಕ ದಾಮೋದರ ಸಾವರ್ಕರ ಎಂಬ ಆ ಯುವಕನ ಸಾಮರ್ಥ್ಯ ಏನಿತ್ತು ಎಂಬುದನ್ನು ಅಂದಾಜು ಮಾಡಬಹುದು ...
ಅತ್ಯಂತ ಚಿಕ್ಕದಾದ ಒಂದು ಕೋಣೆಯೊಳಗೆ ಅವರನ್ನು ಬಂಧಿಸಿದ್ದ ಪೊಲೀಸರು ಇತರ ರಾಜಕೀಯ ಖೈದಿಗಳಿಗೆ ನೀಡುವಂತೆ ಅವರಿಗೆ ಯಾವುದೇ ಸೌಲಭ್ಯ ನೀಡುವುದಿರಲಿ ಕನಿಷ್ಠ ಬರೆಯಲು ಪೆನ್ನು ಪೇಪರನ್ನೂ ನೀಡಲಿಲ್ಲ... ಬ್ರಿಟಿಷರು ಸಾವರ್ಕರರ ವಿಚಾರಧಾರೆಗೆ ಅದೆಷ್ಟು ಭಯಪಡುತ್ತಿದ್ದರು ಎಂಬುದು ಇದರಿಂದಲೇ ವೇದ್ಯವಾಗುತ್ತದೆ... ಆದರೆ ಸಾವರ್ಕರ್ ಮೊಳೆಗಳನ್ನು, ಮುಳ್ಳುಗಳನ್ನು, ಕೈಬೆರಳ ಉಗುರುಗಳನ್ನೇ ಲೇಖನಿಯಾಗಿಸಿ ತನ್ನ ಸೆಲ್ಲಿನ ಗೋಡೆಗಳ ಮೇಲೆಯೇ ಕ್ರಾಂತಿ ಗೀತೆಗಳನ್ನು ಬರೆಯುತ್ತಿದ್ದರು. ತಾನು ಹಾಗೆ ಬರೆದ ಕವಿತೆಗಳ ಹತ್ತು ಸಾವಿರ ಸಾಲುಗಳನ್ನು ಒಂದು ದಶಕಕ್ಕೂ ಹೆಚ್ಚುಕಾಲ ನೆನಪಿನಲ್ಲಿಟ್ಟುಕೊಂಡು ಮೇಧಾವಿ ಸಾವರಕರ್ ತಾವು ಬಿಡುಗಡೆಯಾದ ಬಳಿಕ ಅದನ್ನು ಪ್ರಕಟಿಸಿದರು...
ಸಾವರ್ಕರ್ ಭಾರತದ ದಲಿತರ ಉದ್ಧಾರಕಾಗಿ ಅವಿರತ ಶ್ರಮಿಸಿದವರು ಎಂಬ ಸತ್ಯವನ್ನು ಉದ್ದೇಶಪೂರ್ವಕವಾಗಿಯೇ ಜನರಿಂದ ಮುಚ್ಚಿಡಲಾಯಿತು.. ೧೯೩೧ ನೇ ಇಸವಿಯಲ್ಲಿಯೇ ಸಾವರ್ಕರರ ಪ್ರೇರಣೆಯಂತೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಪತಿತ ಪಾವನ ದೇವಾಲಯ ಸ್ಥಾಪನೆಯಾಯಿತು. ಆ ಮೂಲಕ ದಲಿತರಿಗೆ ದೇವಾಲಯ ಪ್ರವೇಶದ ಜೊತೆಗೆ ಪೂಜಾಧಿಕಾರವನ್ನೂ ನೀಡಲಾಯಿತು.ಇದಾಗಿ ಒಂದು ವರ್ಷದ ಬಳಿಕ ಮಹಾತ್ಮಾ ಗಾಂಧೀಜಿ ೧೯೩೨ರ ಸೆಪ್ಟೆಂಬರ್ ನಲ್ಲಿ ಮೊಟ್ಟಮೊದಲ ಬಾರಿಗೆ ಗಾಂಧೀಜಿ ಅಸ್ಪೃಶ್ಯತೆಯ ವಿರುದ್ಧ ಹೋರಾಟ ಶುರು ಮಾಡಿದ್ದು... !
ಈ ಮಹಾನ್ ಹೋರಾಟಗಾರನಿಗೆ ಸಿಗಬೇಕಾದ ಗೌರವ, ಮರ್ಯಾದೆಗಳು ಅವರು ಬದುಕಿದಷ್ಟು ಸಮಯವೂ ಸಿಗಲಿಲ್ಲ... ಕೇವಲ ದೇಶವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದರೆಂಬ ಕಾರಣಕ್ಕಾಗಿ, ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿದ್ದಾರೆಂಬುದಕ್ಕಾಗಿ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು.ಕೇವಲ ಬ್ರಿಟಿಷರು ಇದನ್ನೆಲ್ಲಾ ಮಾಡಿದ್ದಾರೆ ಅದು ಹೇಗೋ ಸಹಿಸಬಹುದು..... ಆದರೆ ಈ ದೇಶದ ಜನರೇ ಈ ಮಹಾವೀರನ ಬಗ್ಗೆ ತಾತ್ಸಾರ ಬೆಳೆಸಿಕೊಳ್ಳುವ ರೀತಿ ವ್ಯವಸ್ಥಿತ ಪ್ರಚಾರವನ್ನು ನಮ್ಮ ದೇಶದವರೂ ಮಾಡಿದರು... ಕಾಂಗ್ರೆಸ್, ಕಮ್ಯುನಿಷ್ಟರು... ಹೀಗೆ ಎಲ್ಲರೂ ವೀರ ಸಾವರ್ಕರ್ ಅವರನ್ನು ದ್ವೇಷಿಸಿದರು, ದೇಶಕ್ಕೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರಂಥ ಅನೇಕಾನೇಕ ಕ್ರಾಂತಿಕಾರಿಗಳು ನೀಡಿದ ಕೊಡುಗೆಗಳ್ನ್ನು ಉದ್ದೇಶಪೂರ್ವಕವಾಗಿ ದೇಶದ ಪ್ರಜೆಗಳಿಂದ ಮರೆಮಾಚಲಾಯಿತು, ಇತಿಹಾಸವನ್ನು ತಿರುಚಲಾಯಿತು.... ಸುಳ್ಳುಗಳನ್ನೇ ಸತ್ಯವೆಂದು ಪ್ರಚಾರ ಮಾಡಲಾಯಿತು... ಇವತ್ತಿಗೂ ಅದನ್ನು ಮಾಡಲಾಗುತ್ತಿದೆ... ಪ್ರತೀ ಬಾರಿ ಸಾವರ್ಕರ್ ಜಯಂತಿಯ ಸಂದರ್ಭ ಬಂದಾಗಲೂ ರಾಜಕೀಯದ , ಸಮಾಜದ ಒಂದುವರ್ಗ, ಪತ್ರಿಕಾವಲಯದ ಒಂದು ವರ್ಗ ಸಾವರ್ಕರ್ ಅವರನ್ನು ತೇಜೋವಧೆ ಮಾಡುವಂತಹ ಬರಹಗಳನ್ನು, ಲೇಖನಗಳನ್ನು ಪ್ರಕಟಿಸುತ್ತಾ ಅವರನ್ನು ವಿನಾಕಾರಣ ಟೀಕಿಸುತ್ತಾ ವಿಕೃತ ಆನಂದ ಅನುಭವಿಸುತ್ತಿವೆ...
ಆದರೆ ಭಾರತಾಂಬೆಯ ಈ ವೀರಪುತ್ರನ ಅಪ್ರತಿಮ ವ್ಯಕ್ತಿತ್ವಕ್ಕೆಂದೂ ಚ್ಯುತಿಬಾರದು.... ಮುಂದಿನ ದಿನಗಳಲ್ಲಿ ವೀರ ಸಾವರ್ಕರ್ ಬಗ್ಗೆ ಇನ್ನಷ್ಟು ಬರೆಯುತ್ತೇನೆ... ಪತಿತ ಪಾವನ ಸಮಾವೇಶಗಳ ಬಗ್ಗೆಯೂ, ಅದರೊಂದಿಗಿನ ನನ್ನ ನಂಟಿನ ಬಗ್ಗೆಯೂ ಬರೆಯುವುದು ಬೇಕಾದಷ್ಟಿದೆ... ಮುಂದೆ ಬರೆಯುತ್ತೇನೆ...