Infinite Thoughts

Thoughts beyond imagination

ಮಾ.ಮು. ಸಿದ್ರಾಮಯ್ಯನವರ ಮುಪ್ಪಿನ ಮರೆವಿಗೊಂದಿಷ್ಟು ಮದ್ದರೆಯೋಣ...! ವೀರ ಸಾವರ್ಕರ್ ಗೂ ನಕಲಿ ಗಾಂಧಿಗಳಿಗೂ ಇರೋ ವ್ಯತ್ಯಾಸ ತಿಳಿಸೋಣ...!

ಮಾ.ಮು. ಸಿದ್ರಾಮಯ್ಯನವರ ಮುಪ್ಪಿನ ಮರೆವಿಗೊಂದಿಷ್ಟು ಮದ್ದರೆಯೋಣ...!
ವೀರ ಸಾವರ್ಕರ್ ಗೂ ನಕಲಿ ಗಾಂಧಿಗಳಿಗೂ ಇರೋ ವ್ಯತ್ಯಾಸ ತಿಳಿಸೋಣ...!
 
ಪಾಠ -೧
 
ನಮ್ಮ ಕರ್ನಾಟಕದ ಮಾ.ಮು. ಸಿದ್ರಾಮಯ್ಯ ಇತ್ತಿತ್ಲಾಗೆ ಯಾಕೆ ಹೀಗಾಡ್ತಾ ಇದ್ದಾರೆ ಅಂತ ಅರ್ಥ ಅಗ್ತಾ ಇಲ್ಲ... ಪಾಪ... ರಾಜಕೀಯ ಜೀವನದ ಕೊನೆ ಹೊತ್ತಿನಲ್ಲಿ ಈ ರೀತಿಯ ಅಸಹಾಯಕತೆ, ಹತಾಷೆಯ ಭಾವ, ತನಗಿನ್ನೂ ಸಾಮರ್ಥ್ಯ ಇದೆ ಅಂತ ತೋರಿಸುವ ಹಪಾಹಪಿ, ಹೇಗಾದರೂ ಮಾಡಿ ಹೈಕಮಾಂಡಿನ ಗಮನ ಸೆಳೆಯಬೇಕು, ಅಧಿನಾಯಕಿಯ ಕೃಪಾಕಟಾಕ್ಷ ಮತ್ತೊಮ್ಮೆ ಸಿಗಬೇಕು ಅಂತನ್ನೋ ಅಭೀಪ್ಸೆ.. ಅದಕ್ಕಾಗಿ ಏನಾದರೂ ಮಾಡಬೇಕು ಅನ್ನೋ ತರಾತುರಿ...ಇದೆಲ್ಲ ಅವಸ್ಥೆ ಯಾರಿಗೂ ಬರಬಾರದು... ಇತ್ತೀಚೆಗೆ ರಾಜ್ಯ ಕಾಂಗ್ರೆಸ್ಸಿನಲ್ಲಿ ತಾನು ಮೂಲೆಗುಂಪಾಗುತ್ತಿದ್ದೇನೇನೋ ಎಂಬ ಭಯದಲ್ಲಿ ಏನಾದರೂ ಮಾಡಿ ಚಲಾವಣೆಯಲ್ಲಿರಬೇಕು ಅನ್ನೋ ಕಾರಣಕ್ಕೇ ಸಿದ್ರಾಮಣ್ಣ ಹೀಗೆ ಮಾಡುತ್ತಿದ್ದಾರೋ ಏನೋ, ಮೊನ್ನೆ ಸಾವರ್ಕರ್ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆಗಳು, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಬಾರದು ಅಂತ ಅವರು ಮಾಡಿದ ಆಟಾಟೋಪ ನೋಡಿದರೆ ಹೀಗೆಯೇ ಅನ್ನಿಸುತ್ತದೆ.
 
"ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡೋದು ಈ ನಾಡಿನ ಸ್ವಾತಂತ್ರ್ಯ ಹೋರಾಟಗಾಗರಿಗೆ ಮಾಡುವ ಅವಮಾನ" ಅಂತ ಬಾಯಿಗೆ ಬಂದಂತೆ ಹೇಳಿಕೆ ನೀಡುವ ಮುನ್ನ ಸಿದ್ದರಾಮಯ್ಯ ಸಾವಿರ ಸಲ ಯೋಚನೆ ಮಾಡಬೇಕಿತ್ತು... ಇತಿಹಾಸವನ್ನು ಸರಿಯಾಗಿ ನೆನಪಿಸಿಕೊಳ್ಳಬೇಕಿತ್ತು.. ತಾನು ನಡೆದು ಬಂದ ಹಾದಿ ಯಾವುದು ಅಂತ ಆತ ಒಮ್ಮೆ ತಿರುಗಿ ನೋಡಬೇಕಿತ್ತು... ಮೊತ್ತ ಮೊದಲ ಬಾರಿಗೆ ೧೯೮೩ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ "ಭಾರತೀಯ ಲೋಕದಳ " ಪಕ್ಷದಿಂದ ಟಿಕೆಟ್ ಪಡೆದು ಮೊತ್ತ ಮೊದಲ ಬಾರಿಗೆ ಗೆದ್ದು ವಿಧಾನಸಭೆ ಪ್ರವೇಶಿಸಿದ ಸಿದ್ರಾಮಯ್ಯನವರಿಗೆ ಈಗೀಗ ಖಂಡಿತ ಮರೆವಿನ ರೋಗ ಬಡಿದಿದೆ ಅಂತನ್ನಿಸುತ್ತಿದೆ. ಅವರು ಪ್ರತಿನಿಧಿಸಿದ "ಭಾರತೀಯ ಲೋಕದಳ" ಆಗಿನ ಪ್ರಧಾನಿ ಇಂದಿರಾಗಾಂಧಿಯನ್ನು ಶತಾಯ ಗತಾಯ ವಿರೋಧಿಸಿಯೇ ಏಳು ಪಕ್ಷಗಳು ಒಂದಾಗಿ ರಚಿಸಿದ ಪಕ್ಷ ಅದು. ಸಿದ್ದರಾಮಯ್ಯ ೧೯೮೩ ರಲ್ಲಿನ ಮೊಟ್ಟಮೊದಲ ಚುನಾವಣೆಯಿಂದ ಹಿಡಿದು ೨೦೦೬ ರವರೆಗೆ ಭರ್ತಿ ಇಪ್ಪತ್ತೆರಡು ವರ್ಷಗಳ ಕಾಲ ಮಾಡಿದ್ದು ಕಾಂಗ್ರೆಸ್ ವಿರೋಧೀ ರಾಜಕೀಯವನ್ನೇ ಅಲ್ಲವೇ..! ೧೯೮೩ರಲ್ಲಿ ಮೊದಲ ಬಾರಿಗೆ ಶಾಸಕನಾದಾಗ ರಾಮಕೃಷ್ಣ ಹೆಗಡೆಯವರ ಸರಕಾರದಲ್ಲಿ ಸಂಪುಟ ದರ್ಜೆಯ ಸ್ಥಾನಮಾನ ಪಡೆದು ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾದಾಗ ಆ ಸರಕಾರಕ್ಕೆ ಬೆಂಬಲ ನೀಡಿದ್ದು ಬಿಜೆಪಿಯೇ...ಆಗೆಲ್ಲಾ ಬಿಜೆಪಿಯವರ ಜೊತೆಗೇ ಇದ್ದು ಕಾಂಗ್ರೆಸ್ಸಿನ ನೆಹರೂ-ಗಾಂಧಿ ಪರಿವಾರದ ವಿರುದ್ಧ ಸಿದ್ರಾಮಯ್ಯ ಮಾಡುತ್ತಿದ್ದ ರಣಭೀಷಣ ಭಾಷಣಗಳನ್ನು ಇವತ್ತು ಅವರೊಮ್ಮೆ ಪುನಃ ನೆನಪು ಮಾಡಿಕೊಳ್ಳಬೇಕಿತ್ತು.
 
ಇವತ್ತು ಇಡೀ ಭಾರತದೇಶದಲ್ಲಿ ನೆಹರೂ ಮತ್ತು ಈ ನಕಲಿ ಗಾಂಧಿ ಪರಿವಾರದ ಸದಸ್ಯರ ಹೆಸರು ಹೊತ್ತಿರುವ ಅದೆಷ್ಟು ವಿಮಾನ ನಿಲ್ದಾಣಗಳು, ಸ್ಟೇಡಿಯಂ ಗಳು, ಕಾಲೇಜುಗಳು ಕಟ್ಟಡಗಳು, ರಸ್ತೆಗಳು, ಇವೆಎಂಬುದು ಸಿದ್ರಾಮಯ್ಯನವರಿಗೆ ಮರೆತುಹೋಗಿದೆಯೇ... ೧೯೮೦ ರಿಂದ ೨೦೦೫ರವರೆಗೂ ಸಮಾಜವಾದಿ ರಾಜಕಾರಣಿಯ ಸೋಗು ಹಾಕಿಕೊಂಡ ಇದೇ ಸಿದ್ರಾಮಯ್ಯ ಹೀಗೆ ಇದ್ದಬದ್ದ ಸರಕಾರೀ ಯೋಜನೆಗಳಿಗೆ, ಸರಕಾರೀ ಅಸ್ತಿ ಪಾಸ್ತಿ ಕಟ್ಟಡಗಳಿಗೆ ನೆಹರೂ ಗಾಂಧಿ ಪರಿವಾರದ ಹೆಸರಿಡುವುದನ್ನು ಅದೆಷ್ಟು ಕಟುವಾಗಿ ವಿರೋಧಿಸುತ್ತಿದ್ದರು...! ಅದೆಷ್ಟು ಘನಘೋರ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದರು..! ನೆಹರೂ ಮತ್ತು ನಕಲಿ ಗಾಂಧಿಗಳ ಹೆಸರನ್ನು ಈ ದೇಶದಲ್ಲಿ ಯಾವ್ಯಾದಕ್ಕೆಲ್ಲಾ ಇಡಲಾಗಿದೆ ಅಂತ ಸಿದ್ರಾಮಯ್ಯನಿಗೆ ಅರಿವಿಲ್ಲವೇ..? ಹಿಂದೆಲ್ಲ ಅದನ್ನೇ ವಿರೋಧಿಸಿ ಗಂಟೆಗಟ್ಟಲೆ ಭಾಷಣ ಮಾಡಿದ್ದು ಮರೆತು ಹೋಗಿದೆಯೇ..?
 
ನೆಹರು-ನಕಲಿ ಗಾಂಧಿಗಳ ಹೆಸರು ಹೊತ್ತುಕೊಂಡ ಇಪ್ಪತ್ತೆಂಟು ಆಟೋಟ ಸ್ಪರ್ಧೆಗಳು/ಟ್ರೋಫಿಗಳು ಈ ದೇಶದಲ್ಲಿ ಇವತ್ತಿಗೂ ನಡೆಯುತ್ತಿವೆ... ಸುಮಾರು ಇಪ್ಪತ್ತಮೂರು ಕ್ರೀಡಾಂಗಣಗಳಿಗೆ ನೆಹರೂ - ಗಾಂಧಿಗಳ ಹೆಸರಿಡಲಾಗಿದೆ... ಐದು ಏರ್ ಪೋರ್ಟ್ಗಳಿಗೆ, ನೂರಾ ಮೂರು ಶಿಕ್ಷಣ ಸಂಸ್ಥೆಗಳಿಗೆ/ ವಿಶ್ವವಿದ್ಯಾಲಯಗಳಿಗೆ ಇವರ ಹೆಸರಿಡಲಾಗಿದೆ... . ಹದಿನೈದು ರಾಷ್ಟ್ರೀಯ ಉದ್ಯಾನಗಳು/ಮ್ಯೂಸಿಯಮ್ಮುಗಳು, ನಲವತ್ತು ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಲೆಕ್ಕವೇ ಇಲ್ಲದಷ್ಟು ರಸ್ತೆಗಳು, ಸೇತುವೆಗಳು, ನಗರಗಳು ಹೀಗೆ ಪೂರ್ತಿ ಭಾರತವನ್ನೇ ನೆಹರೂ ಮತ್ತು ನಕಲಿ ಗಾಂಧೀಮಯವಾಗಿಸಿರುವ ಕಾಂಗ್ರೆಸ್ಸನ್ನು ಕೇವಲ ಹದಿನೈದು ವರ್ಷಗಳ ಹಿಂದಷ್ಟೇ ವಾಚಾಮಗೋಚರವಾಗಿ ಬಯ್ಯುತ್ತಿದ್ದ ಸಿದ್ರಾಮಯ್ಯ ಇವತ್ತು ಅಧಿನಾಯಕಿಯ ಕಾಲಬುಡದಲ್ಲಿ ಮಕಾಡೆ ಮಲಗಿ ಕೃಪಾಕಟಾಕ್ಷಕ್ಕಾಗಿ ಸಾವರ್ಕರ್ ಅವರನ್ನು ಲೇವಡಿ ಮಾಡುತ್ತಾರೆ... ಎಪ್ಪತ್ತೆರಡರ ಹರೆಯದಲ್ಲಿ ಇದೆಲ್ಲಾ ಬೇಕಾ..?
 
ಜೀವನದಲ್ಲಿ ಪದವಿಶಿಕ್ಷಣವನ್ನೇ ಪೂರೈಸದೇ ಇದ್ದ ರಾಜೀವ್ ಗಾಂಧಿಯ ಹೆಸರು ಹೊತ್ತುಕೊಂಡು ಇವತ್ತು ದೇಶದಲ್ಲಿ ಎಂಟು ಯುನಿವರ್ಸಿಟಿಗಳಿವೆ! ಕೆಂಬ್ರಿಡ್ಜಿನ ಟ್ರಿನಿಟಿ ಕಾಲೇಜಿನಲ್ಲಿ ಮೂರು ವರ್ಷ, ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಮೂರು ವರ್ಷ ಮಣ್ಣು ಹೊತ್ತರೂ ಎಂಜಿನೀಯರಿಂಗ್ ಪಾಸಾಗದ ರಾಜೀವ್ ಹೆಸರಲ್ಲಿ ಅಂದಾಜು ಮೂವತ್ತರಷ್ಟು ಅತ್ಯುನ್ನತ ಶಿಕ್ಷಣ ಸಂಸ್ಥೆಗಳಿವೆ.. ರಾಜೀವಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಾಯನ್ಸಸ್ ನಮ್ಮ ಬೆಂಗಳೂರಿನಲ್ಲೇ ಇದೆ...
 
. ಸಿದ್ದರಾಮಯ್ಯನವರಿಗೆ ಒಂದು ವಿಚಾರ ಸರಿಯಾಗಿ ನೆನಪಿರಲೇಬೇಕು. ೧೯೯೧ ರ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ರಾಮಯ್ಯ ಕೊಪ್ಪಳದಲ್ಲಿ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅಂತ ಅಲ್ಲಿಂದ ಲೋಕಸಭೆಗೆ ಜನತಾದಳ ದಿಂದ ಸ್ಪರ್ಧಿಸಿದರು... ಆಗೆಲ್ಲಾ ಇಂದಿರಾಗಾಂಧಿಯನ್ನೂ ರಾಜೀವ್ ಗಾಂಧಿಯನ್ನೂ ಬಾಯಿಗೆ ಬಂದಂತೆ ಬೈದರು... ಅದೇ ಚುನಾವಣೆಯಲ್ಲಿ ರಾಜೇವ್ ಹತ್ಯೆಯಾಗಿ ಅನುಕಂಪದ ಅಲೆ ಸೃಷ್ಠಿಯಾಗಿ ಸಿದ್ರಾಮಯ್ಯ ಬಸವರಾಜ್ ಪಾಟೀಲ್ ಅನ್ವರಿ ವಿರುದ್ಧ ಸೋತರು... ಗಾಂಧಿಪರಿವಾರವನ್ನು ಸದಾ ಟೀಕಿಸುತ್ತಿದ್ದ ಸಿದ್ರಾಮಯ್ಯ ೧೯೯೨ ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರಿಟ್ಟಾಗ ಏನು ಮಾಡಿದರು?
 
ಅದು ಹೋಗಲಿ.,,, ಈ ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ ಕನಿಷ್ಠ ಪಕ್ಷ ಈ ದೇಶಕ್ಕೆ ಪ್ರಧಾನಿಗಳಾದರೂ ಆಗಿದ್ದರು... ಆದರೆ ಈ ಮೋತೀಲಾಲ್ ನೆಹರೂ ಯಾವ ಸಾಂವಿಧಾನಿಕ ಹುದ್ದೆ ಹೊಂದಿದ್ದರು..? ಜವಾಹರಲಾಲ್ ನೆಹರೂ ಹೆಂಡತಿ ಕಮಲಾ ನೆಹರೂ ಯಾವ ದೊಡ್ಡ ಸಾಧನೆ ಮಾಡಿದ್ದಾರೆ ಅಂತ ಅವರುಗಳ ಹೆಸರನ್ನೂ ಸಾರ್ವಜನಿಕ ಸಂಸ್ಥೆಗಳಿಗೆ, ಕಟ್ಟಡಗಳಿಗೆ, ರಸ್ತೆಗಳಿಗೆ ಇಡಲಾಗಿದೆ..? ಭಾರತದ ಪ್ರಥಮ ಪ್ರಧಾನಿಯ ಅಪ್ಪ ಮೋತೀಲಾಲರ ಹೆಸರಲ್ಲಿ ರಸ್ತೆಗಳು, ಕಾಲೇಜುಗಳು, ಸ್ಟೇಡಿಯಂ ಗಳು, ಹೀಗೆ ಹದಿನೈದು ಕಡೆಗಳಲ್ಲಿ ಮೋತೀಲಾಲ್ ನೆಹರೂ ಎಂಬ ಬೋರ್ಡು ನೇತಾಡುತ್ತಿದೆ... ಕಮಲಾ ನೆಹರೂ ಹೆಸರಲ್ಲೂ ಸರಿಸುಮಾರು ಅಷ್ಟೇ ಸಂಖ್ಯೆಯ ಬೋರ್ಡುಗಳು ದೇಶದ ತುಂಬಾ ಅಲ್ಲಲ್ಲಿ ಇವೆ.. ಬೆಂಗಳೂರಿನ ಬಸವನಗುಡಿಯಲ್ಲಿಯೂ ಕಮಲಾ ನೆಹರು ಹೆಸರಿನ ಇವಿನಿಂಗ್ ಕಾಲೇಜುಗಳಿವೆ...! ಇದನ್ನೆಲ್ಲಾ ಪ್ರಶ್ನಿಸುವ ಗಂಡಸರು ಸಿದ್ರಾಮಯ್ಯನವರ ಸುತ್ತಮುತ್ತ ಯಾರಾದರೂ ಇದ್ದಾರಾ..?
 
ಇಂದಿರಾಗಾಂಧಿಯ ಮುದ್ದಿನ ಮಗ ಎಂಬುದು ಬಿಟ್ಟರೆ ಬೇರಿನ್ಯಾವ ಅರ್ಹತೆಯೂ ಇಲ್ಲದ ಸಂಜಯ್ ಗಾಂಧೀ ಈ ದೇಶಕ್ಕೆ ಕೊಟ್ಟ ಕೊಡುಗೆ ಏನು? ತುರ್ತು ಪರಿಸ್ಥಿಯ ಕಾಲದಲ್ಲಿ ಸಂಜಯ ಗಾಂಧಿಗೆ ವಾಚಾಮಗೋಚರವಾಗಿ ಬಯ್ದಾಡಿಕೊಂಡೇ ತಿರುಗಾಡುತ್ತಿದ್ದ ಸಿದ್ರಾಮಯ್ಯ ಆತನ ಹೆಸರಲ್ಲಿ ಅಂದಾಜು ಮೂವತ್ತಕ್ಕಿಂತಲೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ದೇಶಾದ್ಯಂತ ಸ್ಥಾಪಿಸುವಾಗ ಎಲ್ಲಿದ್ದರು..? ಬೆಂಗಳೂರಲ್ಲೇ ಎರಡು ಆಸ್ಪತ್ರೆ ಎರಡು ಶಿಕ್ಷಣ ಸಂಸ್ಥೆಗಳು ಸಂಜಯ್ ಗಾಂಧಿ ಎಂಬಾತನ ಹೆಸರು ಹೊತ್ತುಕೊಂಡು ನೆಟ್ಟಗೆ ನಿಂತಿದೆಯಲ್ಲ... ಆಗೆಲ್ಲ ಯಾರಿಗೂ ಏನೂ ಅನ್ನಿಸಲಿಲ್ಲವೇ..? ಯಾವನೋ ಉತ್ತರ ಭಾರತದ ನಕಲಿ ಗಾಂಧಿಯ ಹೆಸರು ಇಡುವಾಗ... ಸಂಜಯ್ ಗಾಂಧಿಯ ಹೆಸರು ಬೇಡ ಬದಲಿಗೆ ನಮ್ಮ ಕರ್ನಾಟಕದವರೇ ಯಾರೂ ಇರಲಿಲ್ಲವಾ? ಅಂತ ಪ್ರಶ್ನಿಸಿದ ಒಬ್ಬೇ ಒಬ್ಬ ಕನ್ನಡಪರ ಹೋರಾಟಗಾರ ಯಾರಾದರೂ ಇದ್ದಾರಾ..?
 
ಆಯ್ತು ... ಈ ನೆಹರೂ ಇಂದಿರಾ ರಾಜೀವ್ ದೇಶಕ್ಕೆ ಪ್ರಧಾನಿಗಳಾಗಿದ್ದರು... ಮೋತೀಲಾಲ್ ಮತ್ತು ಕಮಲಾ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು... ಹಾಗಾಗಿಯೇ ಅವರ ಹೆಸರನ್ನೆಲ್ಲ ಹೀಗೆ ವಿವಿಧ ಸಂಸ್ಥೆಗಳಿಗೆ, ಸ್ಟೇಡಿಯಂ ಗಳಿಗೆ ರಸ್ತೆಗಳಿಗೆ, ಪಾರ್ಕ್ ಗಳಿಗೆ, ಸೇತುವೆಗಳಿಗೆ, ಇಡಲಾಯಿತು ಅಂತ ಸಿದ್ರಾಮಯ್ಯ ಮತ್ತು ಅವರಂಥದೇ "ಸೋಗಲಾಡಿ ಸಮಾಜವಾದಿಗಳು" ಬಂಬಡಾ ಬಜಾಯಿಸಿದರೆ... ಪಾಪ ಇಂದಿರಮ್ಮನ ಪ್ರಿಯ ಮಗ ಸಂಜಯ ಆಕಾಶದಲ್ಲೇ ಅಕಾಲವಾಗಿ ಸತ್ತ... ಆ ದುಃಖ ಶಮನಕ್ಕಾಗಿಯೇ ಅವನ ಹೆಸರನ್ನೆಲ್ಲಾ ಯಾವ್ಯಾವುದೋ ಕಾಲೇಜು ಆಸ್ಪತ್ರೆಗಳಿಗೆ ಇಡಲಾಯಿತು... ಇದು ಮಗನನ್ನು ಕಳೆದುಕೊಂಡ ತಾಯಿಯೊಬ್ಬಳಿಗೆ ಸಾಂತ್ವನ ಹೇಳುವ ಸದುದ್ದೇಶದ ಕೆಲಸ ಅಂತ ಸಿದ್ರಾಮಯ್ಯನ ಆಪ್ತರಲ್ಲಿ ಯಾರಾದರೂ ಗೊಣ್ಣೆ ಸುರಿಸುತ್ತ ಅತ್ತರೆ... ಎಲ್ಲರೂ ಸತ್ತವರೇ... ಅವರ ನೆನಪಿಗಾಗಿ ಹಾಗೆ ಹೆಸರಿಟ್ಟರೆ ಯಾರಿಗೇನು ನಷ್ಟ..? ಅಂತ ಲವತ್ತುಕೊಂಡರೆ... ಬೇಕಾದರೆ 'ಹಾಳಾಗಿಹೋಗಲಿ" ಅಂತ ಅದಕ್ಕೂ ಸುಮ್ಮನಿದ್ದುಬಿಡೋಣ...!
 
ಸಿದ್ರಾಮಯ್ಯನವರೇ... ವಯಸ್ಸಾದಾಗ ಮರೆವು ಸಹಜ... ವೃದ್ಧಾಪ್ಯದ ಕಿವುಡು, ಕುರುಡಿಗೂ ಅನುಕಂಪ ಸಹಿತ ಕ್ಷಮೆ ಇದೆ... ಆದ್ರೆ ... ಕೆಲವೊಮ್ಮೆ ಅತೀ ಉಡಾಫೆಯಿಂದ , ಅತೀ ಹುಂಬತನದಿಂದ, ಜಾಣ ಕುರುಡು-ಕಿವುಡುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಹೊರಟರೆ, ವಯಸ್ಸಾಗಿದೆ ಎಂಬುದನ್ನೂ ನೋಡದೇ ಜನಗಳೇ ಹಿಗ್ಗಾಮುಗ್ಗಾ ಜಾಡಿಸಿಯಾರು... ಅದರ ಸ್ಯಾಂಪಲ್ ನಿಮಗೀಗಾಗಲೇ ಸ್ವಕ್ಷೇತ್ರದಲ್ಲೇ ಸಿಕ್ಕಿದೆ... ಇನ್ನೂ ಸಾಯದ, ಜೀವಂತವಾಗಿಯೇ ಇರುವ ನಿಮ್ಮ ಪಕ್ಷದ ಅಧಿನಾಯಕಿ ಮತ್ತು ಆಕೆಯ ಮೊದ್ದುಮಗ ಯಾವ ಘನಂಧಾರೀ ಕೆಲಸ ಮಾಡಿದ್ದಾರೆ ಅಂತ ಅವರಿಬ್ಬರ ಹೆಸರನ್ನು ಸಾರ್ವಜನಿಕ ಸಂಸ್ಥೆಗಳಿಗೆ, ಆಸ್ತಿಪಾಸ್ತಿಗಳಿಗೆ ಇಡಲಾಗುತ್ತದೆ... ? ನಿಮ್ಮ ಬಳಿ ಇದಕ್ಕೇನಾದರೂ ಸಮಾಜವಾದೀ ಸಮಜಾಯಿಷಿ ಇದೆಯಾ...?
 
ಸೋನಿಯಾ ಗಾಂಧಿ ಎಂಬ ಹೆಸರು ಹೊತ್ತುಕೊಂಡು ಈ ದೇಶದಲ್ಲಿ ಆರು ನಗರಗಳು, ಒಂದು ಕಾಲೋನಿ, ಒಂದು ಉರ್ದು ಹೈಸ್ಕೂಲು, ಒಂದು ಡಿಗ್ರಿ ಕಾಲೇಜು, ಒಂದು ಪಾಲಿಟೆಕ್ನಿಕ್ ಇದೆ. ಈ ನಗರಗಳು ಅಂದರೆ ಚಿಕ್ಕ ಬಡಾವಣೆಗಳಷ್ಟೇ... ಅಂಥಾ ಎರಡು "ಸೋನಿಯಾಗಾಂಧಿ ನಗರ್" ಕರ್ನಾಟಕದಲ್ಲೇ ಇದೆ... ಒಂದು ಬಳ್ಳಾರಿಯಲ್ಲಿ, ಇನ್ನೊಂದು ಹುಬ್ಬಳ್ಳಿಯಲ್ಲಿ ಇದೆ... ಈ ಬೆಳ್ಳಗಿನ ವಿದೇಶೀ ಹೆಂಗಸು ಭಾರತೀಯ ಪ್ರಧಾನಿಯ ಮಗನನ್ನೇ ಮದುವೆಯಾದರು, ಬಳಿಕ ಗಂಡನೇ ಪ್ರಧಾನಿಯಾದ, ಅದೊಂದನ್ನೇ ಅರ್ಹತೆ ಮಾಡಿಕೊಂಡು ಗಂಡ ಸತ್ತ ಬಳಿಕ ಭಾರತದ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷೆಯಾದರು ಅನ್ನೋ ಕಾರಣಕ್ಕೆ ಇದನ್ನೆಲ್ಲಾ ನಾವು ಸಹಿಸಿಕೊಳ್ಳಬೇಕೇ ? ಇದನ್ನೆಲ್ಲಾ ಪ್ರಶ್ನಿಸಬಾರದೇ..? ಸೋನಿಯಾ ಮತ್ತಾಕೆಯ ಮಗ ಲೋಕಸಭಾ ಸದಸ್ಯರು ಅನ್ನುವುದನ್ನು ಬಿಟ್ಟರೆ ಭಾರತ ಸರಕಾರದಲ್ಲಿ ಯಾವತ್ತೂ ಕನಿಷ್ಠ ಒಂದು ಮಂತ್ರಿ ಹುದ್ದೆಯನ್ನೂ ನಿಭಾಯಿಸಲಿಲ್ಲ.. ಆದರೂ ಆಕೆಯ ಹೆಸರನ್ನು ಮಾತ್ರ ಅಲ್ಲ ಆಕೆಯ ಮಗ ರಾಹುಲ್ ಗಾಂಧಿಯ ಹೆಸರನ್ನೂ ಹೀಗೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಸ್ಥಳಗಳಿಗೆ ಇಡುವ ಹುಚ್ಚು ಈಗಾಗಲೇ ಪ್ರಾರಂಭ ಆಗಿದೆ...ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಒಂದು, ಮಧ್ಯಪ್ರದೇಶದ ಇಂದೋರಿನಲ್ಲಿ ಮತ್ತೊಂದು "ರಾಹುಲ್ ಗಾಂಧಿ ನಗರ್" ಗಳು ತಲೆ ಎತ್ತಿವೆ, ಇನ್ನೊಂದು ಐದು ವರ್ಷ ಕಳೆಯುವಷ್ಟರಲ್ಲಿ ಇದೆ ಹೆಸರಿನ ಇನ್ನಷ್ಟು 'ನಗರ್' ಗಳು ಸೇರ್ಪಡೆಯಾದರೂ ಆಶ್ಚರ್ಯ ಇಲ್ಲ..! ಒಂದೇ ಕುಟುಂಬದ ಕೇವಲ ಒಂಭತ್ತು ಜನರ ಹೆಸರನ್ನಷ್ಟೇ ಈ ದೇಶದ ಬಹುತೇಕ ಸಾರ್ವಜನಿಕ ಸಂಸ್ಥೆಗಳಿಗೆ, ಸ್ಥಳಗಳಿಗೆ, ಇಡುವುದು ಅದೆಂಥಾ ಸಮಾಜವಾದ ಸಿದ್ರಾಮಯ್ಯಾ,..?
 
ಇಂದಿರಾ, ರಾಜೀವ್, ಸಂಜಯ್, ಸೋನಿಯಾ, ರಾಹುಲ್ ಹೀಗೆ ಎಲ್ಲಾ ನಕಲಿ ಗಾಂಧಿಗಳ ಹೆಸರನ್ನೂ ಭಾರತ ದೇಶದ ಸಾರ್ವಜನಿಕ ಆಸ್ತಿಪಾಸ್ತಿ ಸೊತ್ತುಗಳಿಗೆ ಇಟ್ಟ ಮೇಲೆ ಈ "ಗಾಂಧಿ" ಎಂಬ ಹೆಸರು ಬರಲು ಕಾರಣಪುರುಷ "ಫಿರೋಜ್ ಗಾಂಧೀ' ಎಂಬ ಹೆಸರನ್ನು ಹಾಗೆಯೆ ಬಿಡುವುದಕ್ಕಾಗುತ್ತದೆಯೇ..? ರಾಯ್ ಬರೇಲಿಯಲ್ಲಿ ಫಿರೋಜ್ ಗಾಂಧಿ ಹೆಸರಲ್ಲಿ ಒಂದು ಕಾಲೇಜು ಹೇಗೂ ಹಿಂದೆಯೇ ಇತ್ತು. ೨೦೦೪ರಲ್ಲಿ ಸೋನಿಯಾ ತಮ್ಮ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ 'ಫಿರೋಜ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ' ಎಂಬ ಸಂಸ್ಥೆಯನ್ನು ತಮ್ಮ ದಿವಂಗತ ಮಾವನ ಹೆಸರಲ್ಲಿ ಪ್ರಾರಂಭಿಸಿ ಕೃತಾರ್ಥರಾದರು..! ಫಿರೋಜ್ ಗಾಂಧಿ ಹೆಸರಲ್ಲಿ ಒಂದು ಕಾಲೇಜು ಬಿಹಾರದ ಪಾಟ್ನಾದಲ್ಲೂ ಇದೆ. ಉತ್ತರಪ್ರದೇಶದ ಉಂಚಹಾರ್ ಥರ್ಮಲ್ ಪವರ್ ರಿಯಾಕ್ಟರ್ ಗೆ ಈಗ ಫಿರೋಜ್ ಹೆಸರನ್ನಿಡಲಾಗಿದೆ... ಫಿರೋಜ್ ಹೆಸರಲ್ಲಿ ದೆಹಲಿಯಲ್ಲಿ ಒಂದು ರೋಡ, ಪಂಜಾಬಿನ ಲುಧಿಯಾನದಲ್ಲೊಂದು ಮಾರ್ಕೆಟ್ಟು, ಗುರ್ಗಾಂವ್ ನಲ್ಲೊಂದು ಕಾಲನಿ ಹೀಗೆ ತಕ್ಕ ಮಟ್ಟಿಗೆ ನಾಮಕರಣ ಮಾಡಿ "ಗಾಂಧೀ" ಖಾಂದಾನಿನ ಮೂಲ ಪುರುಷ ಫೀರೋಜ್ ಗಾಂಧಿಗೂ ಕೈಲಾದ ಮಟ್ಟಿಗೆ ನ್ಯಾಯ ಒದಗಿಸಿದ್ದರು.
 
ಸಾವರ್ಕರ್ ಓರ್ವ ಕ್ರಾಂತಿಕಾರೀ ನಾಯಕ... ಸಿದ್ರಾಮಯ್ಯಾ... ನಿಮ್ಮಂತೆ ಆತ ಕೂಡಾ ವಕೀಲ.. ನೀವು ನಿಮ್ಮ ಇತಿಹಾಸವನ್ನೇ ಮರೆತು, ಸೋಷಿಯಲಿಸಮ್ಮಿನ ಮುಖವಾಡವನ್ನೂ ಕಿತ್ತೆಸೆದು ಸೋನಿಯಾ - ರಾಹುಲ್ ಪದತಲದಲ್ಲಿ ಪ್ರತಿಷ್ಠಾಪಿತರಾಗಿ ಬಹಳ ಕಾಲವೇ ಆಯಿತು... ಇನ್ನೂ ಕಾಲ ಮಿಂಚಿಲ್ಲ .. ಹಳೆಯದನ್ನು ನೆನಪು ಮಾಡಿಕೊಳ್ಳಿ, ನೀವೇ ವೇದಿಕೆಗಳಲ್ಲಿ ನೆಹರೂ ನಕಲಿ ಗಾಂಧೀ ಪರಿವಾರವನ್ನು ಟೀಕಿಸಿ ಅಬ್ಬರಿಸಿ ಬೊಬ್ಬಿರಿಯುತ್ತಾ ಮಾಡುತ್ತಿದ್ದ ಭಾಷಣಗಳನ್ನೊಮ್ಮೆ ನೆನಪಿಸಿಕೊಳ್ಳಿ, ಅಸಲಿ ಇತಿಹಾಸವನ್ನು ಮತ್ತೊಮ್ಮೆ ಓದಿಕೊಳ್ಳಿ... ಪುಸ್ತಕ ಓದಿದರೆ ಅರ್ಥವಾಗದಷ್ಟು ದಡ್ಡರೇನೂ ಅಲ್ಲ ನೀವು... ನಿಮ್ಮ ಎಡಚ ಲದ್ದಿ ಜೀವಿ ಸ್ನೇಹಿತರು ನಿಮ್ಮ ಕಿವಿ ತುಂಬಿದ ಅದೇ ಹಳಸಲು ಸುಳ್ಳನ್ನು ಇನ್ನೂ ಮೂಸುತ್ತಾ ಕೂರಬೇಡಿ... ಸತ್ಯಕ್ಕೆ ತೆರೆದುಕೊಳ್ಳಿ, ವೀರ ಸಾವರ್ಕರ್ ಅದೆಂಥಾ ಪ್ರಖರ ದೇಶಭಕ್ತ ಎಂಬುದನ್ನು ಅರಿತುಕೊಳ್ಳಿ... ಅಂದ ಹಾಗೆ ನಿಮ್ಮ ಎಡಬಿಡಂಗಿ ಸ್ನೇಹಿತರ ಮಹಾನ್ ನಾಯಕ ಲೆನಿನ್ ಇನ್ನೂ ರಷ್ಯಾದಲ್ಲಿ ಕ್ರಾಂತಿ ಮಾಡುವ ಮುನ್ನವೇ ವೀರ ಸಾವರ್ಕರ್ ಅವರನ್ನು ಸಾಕಷ್ಟು ಬಾರಿ ಭೇಟಿ ಮಾಡಿದ್ದ ... ನಿಮ್ಮ ಎಡಬಿಡಂಗಿ ಸಲಹೆಗಾರರ ಇನ್ನೊಬ್ಬ ಮಹಾನ್ ನಾಯಕ ಇ ಎಂ ಎಸ್ ನಂಬೂದಿರಿಪ್ಪಾಡ್ ಒಂದು ಪುಸ್ತಕ ಬರೆದಿದ್ದಾರೆ ... ಅದರ ಹೆಸರು A History of Indian Freedom Struggle (1986) ಅಂತ. ಈ ಪುಸ್ತಕವನ್ನೊಮ್ಮೆ ಓದಿ ನಂಬೂದಿರಿಪ್ಪಾಡ್ ನಂಥ ಖಟ್ಟರ್ ಕಮ್ಯುನಿಸ್ಟ್ ನಮ್ಮ ಸಾವರ್ಕರ್ ಬಗ್ಗೆ ಏನು ಬರೆದಿದ್ದಾರೆ ಅಂತ ತಿಳಿದುಕೊಳ್ಳಿ...
 
ಕರ್ನಾಟಕದಲ್ಲಿ ದಾಸೋಹದ ಕಲ್ಪನೆಯನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿದ ಬಸವಣ್ಣನ ಹೆಸರನ್ನೇ ಮರೆತು ಸೋನಿಯಾ ಕೃಪೆಗಾಗಿ ಇಂದಿರಾ ಕ್ಯಾಂಟೀನ್ ಅಂತ ನಾಮಕರಣ ಮಾಡಿದವರು ನೀವು... ನಿಮಗೆ ಇದೆಲ್ಲಾ ಅರ್ಥವೇ ಆಗುವುದಿಲ್ಲ ಅಂತ ಅಲ್ಲ... ಆದರೆ ಅಧಿಕಾರದ ಆಸೆಗಾಗಿ ನೀವು ಏನನ್ನು ಬೇಕಾದರೂ ಬಿಟ್ಟುಬಿಡಬಲ್ಲಿರಿ ಎಂಬುದನ್ನು ಕಾಲಕಾಲಕ್ಕೆ ಸಾಬೀತು ಪಡಿಸುತ್ತಾ ಬಂದಿದ್ದೀರಿ... ಮತ್ತು ನಿಮ್ಮ ಹಳೆಯ ಜಾತ್ಯಾತೀತ ಸ್ನೇಹಿತರಲ್ಲಿ ಕೆಲವರು ನಿಮ್ಮ ಬಗ್ಗೆ "ಈ ಸಿದ್ರಾಮಯ್ಯನಿಗೆ... ಆತನ ಧ್ವನಿಯ ರೀತಿಯೇ ಮೈಚರ್ಮ ಕೂಡಾ... ಎರಡೂ ಗಡಸೇ..." ಅಂತ ಒಂದು ಮಾತನ್ನು ಆಗಾಗ ಹೇಳುತ್ತಾ ಇರುತ್ತಾರೆ... ಇದು ಸತ್ಯವೇ ಇದ್ದೀತು.. ಆದರೂ ನಿಮ್ಮ ಮುಪ್ಪಿನ ಮರೆವಿಗೊಂದಿಷ್ಟು ಮದ್ದರೆಯೋಣ ಅಂತ ಮನಸ್ಸು ಮಾಡಿದ್ದೇನೆ... ವೀರ ಸಾವರ್ಕರ್ ಗೂ ನಕಲಿ ಗಾಂಧಿಗಳಿಗೂ ಇರೋ ವ್ಯತ್ಯಾಸ ತಿಳಿಸೋಣ ಅಂತಲೂ ತೀರ್ಮಾನಿಸಿದ್ದೇನೆ... ಹಾಗಾಗಿ ಇದು ಇವತ್ತಿನದ್ದು ಪಾಠದ ಮೊದಲ ಕಂತು...
 
ನೋಡೋಣ ... ನಾಳೆ ... ನಾಡಿದ್ದರಲ್ಲಿ ಪಾಠದ ಮುಂದಿನ ಕಂತಿನಲ್ಲಿ ಇನ್ನಷ್ಟು ಆಳವಾದ ವಿಷಯಗಳನ್ನು ತಿಳಿಸುತ್ತೇನೆ... ಇನ್ನಾದ್ರೂ ಕಲಿತುಕೊಳ್ಳಿ...
 
ಜೈ ಹಿಂದ್... ಜೈ ಸಾವರ್ಕರ್...

Related posts