Infinite Thoughts

Thoughts beyond imagination

ಕೇರಳದ ಗರ್ಭಿಣಿ ಕಾಡಾನೆ ಹತ್ಯೆಯಾದ ಶೋಕಾಚರಣೆ... ಅದೇ ಸಂಕಟದ ನಡುವೆ ಇಂದು ವಿಶ್ವ ಪರಿಸರ ದಿನಾಚರಣೆ...

ಕೇರಳದ ಗರ್ಭಿಣಿ ಕಾಡಾನೆ ಹತ್ಯೆಯಾದ ಶೋಕಾಚರಣೆ...  

ಅದೇ ಸಂಕಟದ ನಡುವೆ ಇಂದು ವಿಶ್ವ ಪರಿಸರ ದಿನಾಚರಣೆ...   

ಭೂಮಿ ತಾಯಿಯ ಒಡಲು ಅಮೃತ...  ಅಗಣಿತ... ಆಕೆ ಹೆತ್ತ ಮಕ್ಕಳ ಸಂಖ್ಯೆ ಅಸಂಖ್ಯಾತ... ಅನಂತ... ಬರಿಗಣ್ಣಿಗೆ ಕಾಣದ ವೈರಸ್ಸು, ಬ್ಯಾಕ್ಟೀರಿಯಾದಿಂದ ಹಿಡಿದು ನೋಡಲು ಕಣ್ಣೇ ಸಾಲದ ಆನೆ , ತಿಮಿಂಗಲಗಳ ವರೆಗೆ ಈ ಭೂಮಿ ತಾಯಿ ಹೆತ್ತ ಮಕ್ಕಳಿಗೆ ನಾನಾ ರೂಪ, ನಾನಾ ಗಾತ್ರ, ನಾನಾ ಗುಣ... ನಾನಾ ಬಣ್ಣ... ಆಕೆ ಎಲ್ಲರಿಗೂ ಯಾವುದೇ ಬೇಧಭಾವ ಎಣಿಸದೆ, ಇರಲು ಆಶ್ರಯ , ಉಸಿರಾಡಲು ಗಾಳಿ, ತಿನ್ನಲು ಆಹಾರ ಎಲ್ಲವನ್ನೂ ಕೊಟ್ಟು ಪೊರೆಯುವ ಮಹಾತಾಯಿ. ಆಕೆಯ ಸೃಷ್ಟಿಯಲ್ಲಿ ಎಲ್ಲರೂ ಸಮಾನರು... ಎಲ್ಲರಿಗೂ ಸಮ ಪಾಲು, ಎಲ್ಲರಿಗೂ ಸಮಬಾಳು ನೀಡಿದ ವಿಶ್ವದ ಪ್ರಪ್ರಥಮ ಸಮಾಜವಾದೀ ನಾಯಕಿ ಆಕೆ. ಆಕೆಯ ರಾಜ್ಯಭಾರದಲ್ಲಿ ಯಾರಿಗೂ, ಯಾವುದಕ್ಕೂ ಕೊರತೆ ಎಂಬುದೇ  ಇರಲಿಲ್ಲ. ಆದರೆ ಯಾಕೋ ಆಕೆ ಹೆತ್ತು ಸಲಹಿದ ಈ ಅನಂತಾನಂತ ಕೋಟಿ  ಕೋಟಿ ಮಕ್ಕಳ ಪೈಕಿ 'ಮನುಷ್ಯ' ಎಂಬ ಮೃಗಸ್ವರೂಪಿಗೆ ಮಾತ್ರ ಸ್ವಾರ್ಥ ಎಂಬ ರೋಗ ಬಡಿಯಿತು... ಮನುಷ್ಯನೆಂಬ ಈ ಮೃಗಕ್ಕೆ ಈ ಜಗತ್ತಿನಲ್ಲಿರುವುದೆಲ್ಲವೂ ತನಗೆ ಸೇರಿದ್ದು, ತನಗೆ ಮಾತ್ರ ಸೇರಿದ್ದು ಎಂಬ ಹುಚ್ಚು ಉನ್ಮಾದ ತಲೆಗಡರಿತು... ಆತ ಸ್ವೇಚ್ಚಾಚಾರಿಯಾದ... ಎಲ್ಲವನ್ನೂ ಆಕ್ರಮಿಸುವ ಆಕ್ರಮಣಕಾರಿಯಾದ... ತಾನು ಉಣ್ಣಲಿಕ್ಕೆ ಇನ್ನೊಬ್ಬರ ಅನ್ನ  ಕಸಿದ... ತಾನು ವಾಸಿಸಲಿಕ್ಕೆ ಇನ್ನೊಬ್ಬರ ಜಾಗ ಕಸಿದ ಮನುಷ್ಯ ಎಲ್ಲವೂ ತನಗೆ ಬೇಕೆಂಬ ಧಾವಂತದಲ್ಲಿ ಸೃಷ್ಟಿಯ ಸಮತೋಲನವನ್ನೇ ಹಾಳುಗೆಡವಿದ.... 

ಆದ್ರೆ... ಪ್ರಕೃತಿ ಮಾತೆ ಸಹನಾಮಯಿ, ಕ್ಷಮಯಾ ಧರಿತ್ರಿ... ಮನುಷ್ಯನ ಈ ಎಗ್ಗುಸಿಗ್ಗಿಲ್ಲದ ಅತಿಕ್ರಮಣವನ್ನು ಸಹಿಸುತ್ತಲೇ ಬಂದಳು. ಮಾನವನ ಆಕ್ರಮಣಕಾರಿ ಪ್ರವೃತ್ತಿಗೆ ತುತ್ತಾಗಿ ಲಕ್ಷಗಟ್ಟಲೆ ಜೀವ ವೈವಿಧ್ಯಗಳು ಸಂಪೂರ್ಣ ನಾಶವಾಗಿ ಈ ಭೂಮಿಯ ಮೇಲಿಂದಲೇ ಅಳಿದು ಹೋದವು. ಮನುಷ್ಯ ತನಗೆ ಹೊಸದಾಗಿ ಯಾವುದೇ ಜೀವಿಯನ್ನು ಸೃಷ್ಟಿಸುವ ತಾಕತ್ತಿಲ್ಲದೆಯೇ ಹೋದರೂ, ತನಗಿಷ್ಟಬಂದ ಹಾಗೆ ಎಲ್ಲವನ್ನೂ ನಾಶ ಮಾಡುತ್ತ ಸಾಗಿದ... ಕಾಡು ಮೇಡು, ಗಿರಿ ಕಂದರಗಳೆನ್ನದೆ ಎಲ್ಲೆಡೆಯೂ ಮನುಷ್ಯ ಕಾಲೂರಿದ... ಆತ ಹೀಗೆ ಕಾಲೂರಿದ ಕಡೆಯಲ್ಲೆಲ್ಲಾ ನಾಶವೇ... ಅದೆಷ್ಟೋ   ಸಸ್ಯ ಸಂಕುಲಗಳು, ಪ್ರಾಣಿಸಂಕುಲಗಳು ಭೂಮಿ ಮೇಲಿಂದಲೇ ಮರೆಯಾಗಿ ಹೋದವು. 

ಆದರೆ ನಿಧಾನಕ್ಕೆ ಮನುಷ್ಯನ ಈ ಎಲ್ಲಾ ದುಷ್ಕೃತ್ಯಗಳ ಪರಿಣಾಮ ಗೋಚರಿಸುತ್ತ ಹೋಯಿತು, ಪ್ರಕೃತಿ ಮಾತೆ ನಿಧಾನಕ್ಕೆ ತಾನು ಮುನಿಸಿಕೊಂಡಿದ್ದೇನೆ ಅನ್ನೋ ಸೂಚನೆಗಳನ್ನು ಪ್ರಕಟಪಡಿಸ ತೊಡಗಿದಳು... ತಾಯಿಯೇ ಸಿಟ್ಟು ಮಾಡಿಕೊಂಡರೆ, ಆಕೆಯ ಮಕ್ಕಳಿಗೆ ಬೇರಾರು ದಿಕ್ಕು..? ತಮ್ಮ ಇರುವಿನ ಜಾಗಗಳ ಮೇಲೆ ಅತಿಕ್ರಮಣವಾದಾಗ ಯಾರಾದರೂ ಯಾಕೆ ಸುಮ್ಮನಿರುತ್ತಾರೆ...? ಸಂಘರ್ಷ ಪ್ರಾರಂಭ ಆಯಿತು... ಅದು ಅಂತಿಂಥಾ ಸಂಘರ್ಷ ಆಗಿರಲಿಲ್ಲ... ಇದರಲ್ಲಿ ಮನುಷ್ಯ ಏಕಾಂಗಿಯಾಗಿ ಬಿಟ್ಟಿದ್ದ.. ತನ್ನ ವಿರುದ್ಧ ಇಡೀ ಪ್ರಕೃತಿಯೇ ತಿರುಗಿ ಬೀಳುವ ಸೂಚನೆ ದೊರೆತಾದ ಮೇಲೆಯೇ ಮನುಷ್ಯ ಸ್ವಲ್ಪ ಮೆತ್ತಗಾದದ್ದು... ಆತನಿಗೆ ತನ್ನ ಹೆತ್ತ ತಾಯಿಯ ...ಪ್ರಕೃತಿ ಮಾತೆಯ ಕೋಪ ಅರಿವಿಗೆ ಬರತೊಡಗಿತು... ಅದಕ್ಕಾಗಿ ತಾನು ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸುವ ಕೆಲಸಕ್ಕೆ ಕೈಹಾಕಿದ... ಆದರೆ ಅದೆಷ್ಟೋ ಸಂಗತಿಗಳು ತಿರುಗಿ ಬಾರದ ಸ್ಥಿತಿಗೆ ತಲುಪಿಯಾಗಿತ್ತು. 

ಕಾಡು ಬಿಟ್ಟು ನಾಡಿಗೆ ಬಂದ ಹುಲಿ, ಚಿರತೆ, ಕಾಡಾನೆ, ಮುಂತಾದ ಗಂಭೀರ ವಿಷಯಗಳೆಲ್ಲಾ  ಪತ್ರಿಕೆಗಳಿಗೆ ಆಹಾರವಾಗಿ ಸುದ್ದಿಯಾದವು...ಮನುಷ್ಯರೂ ಅವುಗಳನ್ನು ಓದಿ ಮಡಚಿ ಮೂಲೆಗಿಟ್ಟರು... ಆದರೆ ಈ ಸಂಘರ್ಷದ  ವಿಷಯ ಚಿಕ್ಕದೇನಲ್ಲ... ಅದು ನಿಜಕ್ಕೂ ತುಂಬಾ ಗಂಭೀರವಾಗಿದೆ. ಇವತ್ತು ಭಾರತದಲ್ಲಿ ಮನುಷ್ಯ ಮತ್ತು ಕಾಡುಮೃಗಗಳ ಸಂಘರ್ಷದ್ದೇ ಒಂದು ದೊಡ್ಡ ವಿಷಯ... ಆನೆಗಳು ಕಾಡು ಬಿಟ್ಟು ನಾಡಿಗೆ ನುಗ್ಗಿ ಮನುಷ್ಯರಿಗೆ ತೊಂದರೆ ಮಾಡಲಾರಂಭಿಸಿದವು... ಆನೆಗಳು ಬಹಳ ಬುದ್ಧಿವಂತ ಪ್ರಾಣಿಗಳು. ಅವುಗಳ ನೆನಪಿನ ಶಕ್ತಿ ಅಗಾಧ... ಸಾವಿರಾರು ವರ್ಷಗಳಿಂದಲೂ ಆನೆಗಳು ಮಾತ್ರವಲ್ಲ ಇತರೆಲ್ಲ ವನ್ಯ ಮೃಗಗಳೂ ಕೂಡಾ ತಾವು ವಾಸಿಸುವ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವ ರೂಢಿಯನ್ನು ಮಾಡಿಕೊಂಡಿರುತ್ತವೆ... ಈ ಅಭ್ಯಾಸ ತಲೆತಲಾಂತರಗಳಿಂದಲೂ ವಂಶವಾಹಿಗಳಲ್ಲೇ ಅವುಗಳಿಗೆ ದಾಟಿ ಬಂದಿರುತ್ತವೆ. ಹಾಗಾಗಿ ವರ್ಷದ ಋತುಗಳಿಗೆ ಅನುಗುಣವಾಗಿ ಅವು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ವಲಸೆ ಹೋಗಿ ಮತ್ತೆ ಮರಳಿ ಬರುತ್ತವೆ... ಅವುಗಳು ಸಂಚರಿಸುವ ಕಾಡಿನ  ಆ ದಾರಿ ಅವುಗಳಿಗೆ ಹೈವೇ ಗಳಿದ್ದಂತೆ... ಈ ಹೈವೇಗಳ ನಿರ್ಮಾಣ ನಾವು ನೀವಲ್ಲ... ಈ ದೇಶ ಹುಟ್ಟೋದಕ್ಕಿಂತಲೂ ಮೊದಲೇ ಆಗಿವೆ... ಹಾಗಾಗಿ ಅವುಗಳ ಸಂಪೂರ್ಣ ಹಕ್ಕುದಾರರು ಅವೇ ಕಾಡು ಪ್ರಾಣಿಗಳು... 

ನಮ್ಮ ದೇಶದಲ್ಲಿ ಒಟ್ಟು ಹದಿನೈದು  ರಾಜ್ಯಗಳಲ್ಲಿ   ಅಂದಾಜು ಸುಮಾರು ಹದಿನೈದು ಸಾವಿರ ಆನೆಗಳು ಇವೆ. ಆನೆಗಳು ಬೃಹತ್ ಗಾತ್ರದ ಪ್ರಾಣಿಗಳಾದ ಕಾರಣ ಅವುಗಳು ಗುಂಪುಗಳಲ್ಲಿ ವಾಸಿಸುವ ಕಾರಣ, ಅವುಗಳು  ಸಂಚರಿಸುವ ಈ ದಾರಿಗಳು ವಿಶಾಲವಾಗಿರಬೇಕಾಗುತ್ತವೆ... ಅವುಗಳು ಸಾಗುವ ದಾರಿಯಲ್ಲಿ ಸಾಕಷ್ಟು ಕಾಡು ಗಿಡ ಮರಗಳು ಇರಬೇಕಾಗುತ್ತವೆ... ಯಾಕೆಂದರೆ ಅವುಗಳಿಗೆ ಬೇಕಾಗುವಷ್ಟು ಪ್ರಮಾಣದ ಮೇವು, ಸಂಚರಿಸಲು, ತಂಗಲು ಸಾಕಷ್ಟು ಸ್ಥಳಾವಕಾಶ ಇರಬೇಕಾಗುತ್ತದೆ. ಆದರೆ ಮನುಷ್ಯರ ಜನಸಂಖ್ಯೆ ತೀರಾ ಹೆಚ್ಚಿ ಆತ ಈ ಸಾವಿರಾರು ವರ್ಷಗಳಷ್ಟು ಪೂರ್ವದ ಕಾರಿಡಾರ್ ಗಳನ್ನು ಅತಿಕ್ರಮಿಸಿ ತೋಟ, ಹೊಲ, ಗದ್ದೆ, ಮನೆ, ಹಳ್ಳಿ ಪಟ್ಟಣಗಳನ್ನು ನಿರ್ಮಿಸಿಕೊಂಡಿರುತ್ತಾನೆ... ಆದರೆ ಆನೆಗಳು ತಮ್ಮ ವಂಶವಾಹಿಗಳಲ್ಲೇ ಬಂದಿರುವ ಸಂಜ್ಞೆಗಳಿಗನುಸಾರವೇ ವರ್ಷದಲ್ಲೊಂದು ಬಾರಿ ತನ್ನ ಒಂದು ವಾಸಸ್ಥಾನದಿಂದ ನೂರಾರು ಕಿಲೋಮೀಟರು ಇರುವ ಇನ್ನೊಂದು ವಾಸಸ್ಥಾನಕ್ಕೆ ಪಯಣಿಸಿ ಮರಳಿ ಬರುತ್ತವೆ.. ಆದರೆ ಅವುಗಳ ಈ ಮಾಮೂಲು ದಾರಿಯಲ್ಲಿ ಮನುಷ್ಯ ತಾನು ಅತಿಕ್ರಮಣ ಮಾಡಿ ಕಟ್ಟಿಕೊಂಡ ಈ ನಾಗರೀಕ ವ್ಯವಸ್ಥೆಯಿಂದ ಆನೆಗಳಿಗೆ ಕಿರಿಕಿರಿಯಾಗುತ್ತವೆ. ಅವುಗಳು ಸಹಜವಾಗಿಯೇ ಮನುಷ್ಯನ ಅಸ್ತಿ ಪಾಸ್ತಿಗಳ ಮೇಲೆ ದಾಳಿ ಮಾಡಿ ಹಾಳುಗೆಡವುತ್ತವೆ... ಇದೆಲ್ಲದರಿಂದಾಗಿ ಮನುಷ್ಯ ಮತ್ತು ಆನೆಗಳ ನಡುವೆ ಸಂಘರ್ಷ ಉಂಟಾಗುತ್ತದೆ... ಇವತ್ತು ಇದು ಅದೆಂಥಾ ಗಂಭೀರ ಮಟ್ಟ ಮುಟ್ಟಿದೆಯೆಂದರೆ ವರ್ಷವೊಂದಕ್ಕೆ ಅಂದಾಜು ೪೦೦ ಜನ ಆನೆಗಳಿಗೆ ಬಲಿಯಾಗುತ್ತಿದ್ದಾರೆ... ಮತ್ತು ಆನೆಗಳಿಂದ ಅಂದಾಜು ಒಂದು ಮಿಲಿಯನ್ (ಹತ್ತು ಲಕ್ಷ) ಹೆಕ್ಟೇರು ಗಳಷ್ಟು ಕೃಷಿ ಜಮೀನು ಮತ್ತು ಫಸಲು ನಾಶವಾಗುತ್ತಿವೆ.. ಒಂದು ಕುಟುಂಬಕ್ಕೆ ಸರಾಸರಿ ಎರಡು ಹೆಕ್ಟೇರು ಪ್ರದೇಶವೆಂದುಕೊಂಡರೂ ಪ್ರತೀ ವರ್ಷ ಆನೆಗಳ ಈ ಸಂಚಾರದಿಂದಾಗಿ ವರ್ಷಕ್ಕೆ ಸುಮಾರು ಐದು ಲಕ್ಷ ಕುಟುಂಬಗಳು ಸಂಕಷ್ಟ  ಅನುಭವಿಸುತ್ತವೆ. 

ಆನೆ  ಕಾರಿಡಾರುಗಳಿಂದಾಗಿ ಅದೆಷ್ಟೋ ಬೃಹತ್ ಯೋಜನೆಗಳೂ ಕಾರ್ಯಗತವಾಗುವುದಿಲ್ಲ... ಉದಾಹರಣೆಗೆ ನಮ್ಮದೇ ಜಿಲ್ಲೆಯ ಹುಬ್ಬಳ್ಳಿ  ಅಂಕೋಲಾ ಬ್ರಾಡ್ ಗೇಜ್ ರೈಲ್ವೆ ಲೈನು, ೧೯೯೮ರಲ್ಲೇ ಯೋಜನೆ ರೂಪಿಸಲಾಗಿದ್ದರೂ ಅಂದಾಜು ಆರುನೂರು ಹೆಕ್ಟೇರು ಭೂಮಿ ಅರಣ್ಯ ಪ್ರದೇಶವಾಗಿದ್ದುದರಿಂದ..  ಅದರಲ್ಲೂ ಧಾರವಾಡ ಕಾರಿಡಾರ್ , ಯೆಲ್ಲಾಪುರ ಕಾರಿಡಾರ್ ಗಳಿಂದಾಗಿ ಈ ಯೋಜನೆಗೆ ಅನುಮತಿಯೇ ಸಿಗಲಿಲ್ಲ... ಇದಕ್ಕೆ ಬದಲೀ ಮಾರ್ಗವೊಂದೇ ಪರಿಹಾರ... 

ಭಾರತದಲ್ಲಿ ಮೊದಲಿಗೆ ಇಂಥಾ ಎಂಭತ್ತೆಂಟು ಕಾರಿಡಾರ್ಗಳನ್ನು ಗುರುತಿಸಲಾಗಿತ್ತಾದರೂ ಈಗ ಅದರ ಸಂಖ್ಯೆ ಹೆಚ್ಚಿದೆ. ಹೆಚ್ಚಿನ ಕಾರಿಡಾರ್ಗಳ ಕೆಲಸ ಭರದಿಂದ ಸಾಗಿವೆ.. ಕರ್ನಾಟಕದಲ್ಲಿ ಮತ್ತು ಕೇರಳದಲ್ಲಿ ಆನೆಗಳ ಮತ್ತು ಮನುಷ್ಯರ ಸಾವುನೋವುಗಳಿಗೆ ಮನುಷ್ಯ ಮಾಡಿರುವ ಮತ್ತು ಮಾಡುತ್ತಿರುವ ಅತಿಕ್ರಮಣಗಳೇ ಕಾರಣ... ಈಗ ಕಾರಿಡಾರ್ ನಿರ್ಮಾಣ ಕೆಲಸ ಶುರುವಾಗಿದೆ... ಮುಂದೊಂದು ದಿನ ಈ ಕಾರಿಡಾರ್ ಗಳು ಪೂರ್ಣ ಪ್ರಮಾಣದಲ್ಲಿ ರಚನೆಯಾದ ಮೇಲೆ ಆನೆಗಳು ಅವುಗಳ ಪಾಡಿಗೆ ಕಾಡಿನಿಂದ ಇನ್ನೊಂದು ಕಾಡಿಗೆ ಮುಕ್ತವಾಗಿ ಸಂಚರಿಸುತ್ತಾ, ಮನುಷ್ಯರ ಸುದ್ದಿಗೆ ಬರದೇ ಅದರ ಪಾಡಿಗೆ ಬದುಕುತ್ತವೆ. ಆಗ ಈ ಎಲ್ಲಾ ದುರಂತಗಳು ಸಂಭವಿಸುವುದಿಲ್ಲ... 

ಮೊನ್ನೆ ಕೇರಳದಲ್ಲಿ ನಡೆದ ಘಟನೆ ಮಾತ್ರ ಹೃದಯ ವಿದ್ರಾವಕ. ಪಾಲಕ್ಕಾಡ್ ಮತ್ತು ಮಲಪ್ಪುರಂ ನಡುವಿನ ಪ್ರದೇಶದಲ್ಲಿ ನಡೆದ ಈ ಭೀಕರ ಘಟನೆ ಇಡೀ ಪ್ರಪಂಚದ ಗಮನ ಸೆಳೆದಿದೆ.... ಆಹಾರ ಅರಸಿ ನಾಡಿಗೆ ಬಂದ  ಹೆಣ್ಣು ಕಾಡಾನೆಯೊಂದು ಫರಂಗಿ ಹಣ್ಣಿಗೆ ಬಾಯಿ ಹಾಕಿದಾಗ, ಆ  ಹಣ್ಣಿನೊಳಗೆ ಅವಿತಿರಿಸಲಾಗಿದ್ದ ಸ್ಪೋಟಕ ವೊಂದು ಸ್ಪೋಟಿಸಿ, ಆ ಮೂಕ ಪ್ರಾಣಿಯ ಬಾಯಿಯೇ ಘಾಸಿಗೊಂಡು, ಅದು ಆ ನೋವಿನಿಂದ ಮುಕ್ತಿ ಹೊಂದಲು ಅಲ್ಲೇ ಹರಿಯುತ್ತಿರುವ ವೆಳ್ಳಿಯಾರ್ ನದಿಯಲ್ಲಿ ನಿಂತು ಕೊಂಡು ಹಾಗೆಯೆ ತನ್ನ ಬಾಯಿಯನ್ನು ನೀರಲ್ಲಿ ಮುಳುಗಿಸಿ ನೋವನ್ನು ಶಮನ ಮಾಡುವ ವಿಫಲ ಪ್ರಯತ್ನ ಮಾಡುತ್ತಾ ಅಲ್ಲೇ ಕೊನೆಯುಸಿರೆಳೆಯಿತು. ಎಲ್ಲಕ್ಕಿಂತಲೂ ನೋವಿನ ವಿಷಯವೆಂದರೆ ಗರ್ಭಧರಿಸಿದ್ದ ಆ ಹೆಣ್ಣಾನೆಯ ಸಾವಿನಿಂದಾಗಿ ಅದರ ಉದರದಲ್ಲೇ ಆ ಪುಟ್ಟ ಮರಿಯಾನೆಯೂ ಪ್ರಾಣಬಿಟ್ಟಿತು... ಮನುಷ್ಯ ಅದೆಷ್ಟು ಕ್ರೂರಿ...?

ತಾನೇ ಕಾಡನ್ನು ಅತಿಕ್ರಮಿಸಿ ಆಸ್ತಿಪಾಸ್ತಿ, ಹೊಲಗದ್ದೆ ಮಾಡಿಕೊಂಡು, ಸಾವಿರಾರು ವರ್ಷಗಳಿಂದ ಇದ್ದ ಆನೆಗಳ ಸ್ವತ್ತನ್ನು ವಶಪಡಿಸಿಕೊಂಡು, ಈಗ ಆನೆಗಳೇ  ತಮ್ಮ ಮೇಲೆ ದಾಳಿ ಮಾಡಿ ತಮ್ಮ ಆಸ್ತಿಪಾಸ್ತಿ, ಬೆಳೆಯನ್ನು ನಾಶಮಾಡಿತು ಅಂತ ಅಲವತ್ತುಕೊಳ್ಳುತ್ತಾನೆ... ಜೊತೆಗೆ ತನ್ನ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹೀಗೆ ಹಣ್ಣುಗಳೊಳಗೆ ಬಾಂಬಿಟ್ಟು ಆ ಮುಗ್ಧ ಪ್ರಾಣಿಗಳನ್ನು ಹತ್ಯೆ ಮಾಡುತ್ತಾನೆ...ಹೀಗೆ ಆನೆಗಳ ಮತ್ತು ಇತರ ಕಾಡುಪ್ರಾಣಿಗಳ ಹತ್ಯೆಗೆ ಸ್ಫೋಟಕ ಬಳಸುವ ಚಾಳಿ ಈಗ್ಗೆ ಕೆಲವೊಂದಷ್ಟು  ವರ್ಷದಿಂದ ಶುರುವಾಗಿದೆ. ಶ್ರೀಲಂಕಾದಲ್ಲಂತೂ ಈ ರೀತಿಯ  ಸ್ಫೋಟಕ ಗಳಿಂದ ಹತ್ಯೆಯಾಗುತ್ತಿರುವ ಆನೆಗಳ ಸಂಖ್ಯೆ ತುಂಬಾ ಹೆಚ್ಚಿದೆ.. 

ಇದಕ್ಕಿಂತಲೂ  ತುಂಬಾ ಗಂಭೀರವಾದ ವಿಷಯವೆಂದರೆ ಇಂಥಾ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡದಿರುವುದು, ಈ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸದೆಯೇ ಇರುವುದು, ಇಂಥಾ ಅಪರಾಧಿಗಳು ಶಿಕ್ಷೆಯಿಂದ ಸುಲಭವಾಗಿ ನುಣುಚಿಕೊಳ್ಳುವುದು... ಇತ್ಯಾದಿಯಂತೂ ಆದಾಗ ರೋಷ ಉಕ್ಕುತ್ತದೆ... ಕೇರಳದಲ್ಲಿ ಹೀಗೆ ಅನಾನಸು ಹಣ್ಣಿನೊಳಗೆ ಅವಿತಿರಿಸುವಂಥ ಸ್ಫೋಟಕಗಳು ಹೇಗೆ ಸಿಗುತ್ತವೆ? ಯಾರು ತಯಾರು ಮಾಡುತ್ತಾರೆ? ಇವೆಲ್ಲವೂ ಇಂಪ್ರೂವೈಸ್ಡ್ ಎಕ್ಸ್ಪ್ಲೋಸಿವ್ ಡಿವೈಸ್ ಗಳು ಅಂದರೆ ಐ.ಇ.ಡಿ ಗಳು... ಇವನ್ನು ಕೇರಳದಲ್ಲಿ ತಯಾರು ಮಾಡುವವರು ಯಾರು...? ಪ್ರಾಣಿಗಳು ಕಚ್ಚಿದೊಡನೆಯೇ ಸ್ಫೋಟವಾಗುವಂತೆ ಹೇಗೆ ಈ ಬಾಂಬನ್ನು ವಿನ್ಯಾಸಗೊಳಿಸಿ ಅಳವಡಿಸಿದ್ದು ಯಾರು? ಅದಕ್ಕೆ ಉಪಯೋಗಿಸಲಾದ ತಂತ್ರಜ್ಞಾನ ಯಾವುದು? ಈ ಪ್ರಕರಣ ಬಯಲಾದ ಕೂಡಲೇ ಆಡಳಿತದಲ್ಲಿರುವ ಕಮ್ಯುನಿಸ್ಟ್ ಪಕ್ಷ ಮತ್ತು ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ... ಹೀಗೆ ಎರಡೂ ಪಕ್ಷಗಳೂ ಅನುಮಾನಾಸ್ಪದವಾಗಿ ಮೌನ ವಹಿಸಿವೆ...! ಬೇರೆಲ್ಲಾದರೂ ಇಂಥಾ ಪ್ರಕರಣವಾಗಿದ್ದರೆ, ಇವೆಲ್ಲ ದಂಡು ದಾಳಿ ಸಮೇತ ಮಾಧ್ಯಮಗಳಲ್ಲಿ ಬಾಯಿ ಹರಕೊಳ್ಳುತ್ತಿದ್ದವು... ಯಾಕೋ ಪ್ರಾಣಿ ಪ್ರೇಮೀ ಎಡಚ ಬುದ್ಧಿಜೀವಿಗಳೆಲ್ಲಾ ಇವತ್ತು ಎಲ್ಲಾ ಮುಚ್ಚಿಕೊಂಡು ಕೂತಿದ್ದಾರೆ..! ಯಾಕೆ..? ಬಾಂಬಿಟ್ಟವರಿಗೂ ಇವರಿಗೂ ಏನು ಸಂಬಂಧ..? 

ರಾಹುಲ್ ಗಾಂಧೀ ತನ್ನ ಸ್ವಕ್ಷೇತ್ರದಲ್ಲಿ ಸೋತು ಈಗ ಕೇರಳದಲ್ಲಿ ಗೆದ್ದು ಸಂಸದನಾಗಿದ್ದಾರೆ. ಎರಡು ವರ್ಷದ ಹಿಂದೆ ಮಹಾರಾಷ್ಟ್ರದಲ್ಲಿ ಅವನೀ ಎಂಬ ನರಭಕ್ಷಕ ಹುಲಿಯೊಂದನ್ನು ಅರಣ್ಯಾಧಿಕಾರಿಗಳು ಗುಂಡಿಟ್ಟು ಸಾಯಿಸಿದಾಗ ಆಕಾಶ ಭೂಮಿ ಒಂದು ಮಾಡಿ ಆ ಹುಲಿಯನ್ನು ಮಹಾರಾಷ್ಟ್ರ ಸರಕಾರ (ಆಗ ಬಿಜೆಪಿಯ ಫಡ್ನವೀಸ್ ಸರಕಾರ ಇತ್ತು) ಅನ್ಯಾಯವಾಗಿ ಕೊಂದು  ಹಾಕಿತು ಅಂತೆಲ್ಲ ನಾಟಕ ಮಾಡಿದ್ದ ರಾಹುಲ್ ಗಾಂಧೀ .... ಈಗ ಅವರ ಕೇರಳದಲ್ಲೇ ಇಂಥಾ ಭೀಭತ್ಸ ಘಟನೆಯಾಗಿರುವಾಗ ಯಾಕೆ ಬಾಯಿ ಮತ್ತೊಂದನ್ನೆಲ್ಲಾ ಮುಚ್ಚಿಕೊಂಡು ಮೌನವಾಗಿದ್ದಾರೆ... ಕನಿಷ್ಠ ಈ ಕೃತ್ಯವನ್ನು ಖಂಡಿಸುವ ಕೆಲಸವನ್ನಾದರೂ ಮಾಡಬಹುದಿತ್ತಲ್ಲ....? ಉಹೂಂ ರಾಹುಲ್ ಮನದಲ್ಲಿ ಬೇರೇನೋ ಅರ್ಥ ಇರುವಂತಿದೆ... 

ಕೇರಳದ ಸರಕಾರವೀಗಲೇ ಈ ಪ್ರಕರಣವನ್ನು ಮುಚ್ಚಿಹಾಕಲು ವೇದಿಕೆ ಸಿದ್ಧಪಡಿಸಿಯಾಗಿದೆ. ಯಾಕೆಂದರೆ ಈ ರೀತಿ ಸ್ಫೋಟಕವನ್ನು ಕಚ್ಚಿ ಆನೆ ಸಾಯುತ್ತಿರುವುದು ಕೇರಳದಲ್ಲಿ  ಇದು ಮೊದಲಲ್ಲ... ಈ ಘಟನೆ ವರದಿಯಾಗುವುದಕ್ಕಿಂತ ಮೊದಲೇ ಕೊಲ್ಲಮ್ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಣ್ಣಾನೆಯೊಂದು ಸತ್ತಿತ್ತು. ಪೋಸ್ಟ್ ಮಾರ್ಟಮ್ ಮಾಡುವಾಗ ಈ ಆನೆಯ ದವಡೆ ಕೂಡಾ ಮುರಿದಿತ್ತು.... ಅಂದರೆ ಆ ಾನೆ ಕೂಡಾ ಈ ರೀತಿಯೇ ಸ್ಫೋಟಕಕ್ಕೆ ಬಾಯಿ ಹಾಕಿದ್ದರಿಂದಲೇ ಈ ರೀತಿ ಸಾವು ಸಂಭವಿಸಿರಬಹುದು ಅಂತ ಅಂದಾಜಿಸಲಾಗಿದೆ... ಹಾಗಾಗಿ ಪಿಣರಾಯಿ ಸರಕಾರಕ್ಕೆ ಈ ಎರಡೂ ಆನೆಗಳ ಸಾವನ್ನು ಹಾಗೆಯೇ ಮುಚ್ಚಿಹಾಕುವುದರಿಂದಲೇ ಹೆಚ್ಚಿನ ಲಾಭ . ಅದಕ್ಕೆ ವೇದಿಕೆ ಕೂಡಾ ಸಿದ್ಧವಾಗಿದೆ.. ಪ್ರಿನ್ಸಿಪಾಲ್ ಚೀಫ್ ಕನ್ಸರ್ವೇಟರ್ ಆಫ್ ಫಾರೆಸ್ಟ್ (ವನ್ಯ ಜೀವಿ ವಿಭಾಗ) ಸುರೇಂದ್ರಕುಮಾರ್  ಅಧಿಕೃತವಾಗಿಯೇ " ಇದೊಂದು ಆಘಾತವಾಗಿರಬಹುದು, ಯಾರೂ ಉದ್ದೇಶಪೂರ್ವಕ ಮಾಡಿರಲಾರರು.. ಈ ರೀತಿ ಅನಾನಾಸು ಮುಂತಾದ ಹಣ್ಣುಗಳಲ್ಲಿ ಪಟಾಕಿಗಳನ್ನು ಇಟ್ಟು  ಕಾಡುಪ್ರಾಣಿಗಳನ್ನು ಹೆದರಿಸುವ ಅಭ್ಯಾಸ ಈ ಪ್ರದೇಶದಲ್ಲಿ ಸಾಮಾನ್ಯವಾಗಿದೆ "... ಅಂತ ಈ ಅಧಿಕಾರಿ ಹೇಳುತ್ತಾನೆಂದರೆ ....ಇನ್ನು ಕೇಸು ಅಲ್ಲಿಗೇ ಕೊನೆಯುಸಿರೆಳೆಯಿತೆಂದೇ ಅರ್ಥ.. ಅದಲ್ಲದೆ ಆನೆ ಬಾಯಿ ಹಾಕಿರೋದು ಅನಾನಸಿನಲ್ಲಿ ಇಡಲಾಗಿದ್ದ ಪಟಾಕಿಗಳಾ  ಅಥವಾ ಬೆಲ್ಲದೊಳಗೆ ಇಡಲಾಗಿದ್ದ ಪಟಾಕಿಗಳಾ ಅಂತ ತನಿಖೆ ನಡೆಯುತ್ತಿದೆ... ಯಾರೋ ಒಬ್ಬರು ಪಟಾಕಿ ತುಂಬಿಸಿದ ಪೈನಾಪಲ್ ಹಣ್ಣನ್ನು ಆನೆಗೆ ತಿನ್ನಿಸುತ್ತಾರೆ ಎಂಬುದೇ ತೀರಾ ಅವಾಸ್ತವಿಕ.... " ಅಂತೆಲ್ಲ ಪತ್ರಕರ್ತರೊಂದಿಗೆ ಇಷ್ಟು ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿ ಹೇಳುತ್ತಾನೆಂದರೆ ... ಇನ್ನು ಈ ಕೇಸಿನ ಭವಿಷ್ಯದ ಬಗ್ಗೆ ಬೇರೇನೂ ಹೇಳುವುದು ಅವಶ್ಯವಿಲ್ಲ ಅಂತಾನೆ ಅರ್ಥ... 

ಜಗತ್ತೆಲ್ಲ ತನಗಾಗಿಯೇ ಇರುವುದು, ಜಗತ್ತಿನಲ್ಲಿರುವ ಅಷ್ಟೂ ಜೀವಸಂಕುಲಗಳೆಲ್ಲಾ ತನ್ನ ಉಪಯೋಗಕ್ಕಾಗಿಯೇ ಇರೋದು, ಅದಕ್ಕೆಂದೇ ಇದನ್ನೆಲ್ಲಾ ದೇವರು  ಸೃಷ್ಟಿ ಮಾಡಿದ್ದಾರೆ ಅಂತಲೇ ನಂಬುವುದು, ಇಂಥ ನಂಬಿಕೆಗೆ ಧರ್ಮದ ಲೇಪ ಹಚ್ಚುವುದು, ಧರ್ಮ ಗ್ರಂಥದ ಉದಾಹರಣೆ ಕೊಡುವುದು... ಅಂತೂ ತಾನು ಮಾತ್ರ ಈ ಜೀವ ಸೃಷ್ಟಿಯಲ್ಲಿ ಅತೀ ಪ್ರಮುಖ ಸ್ಥಾನ ಹೊಂದಿರುವವನು ಎಂಬ ಭ್ರಮಾಧೀನ ಮನಸ್ಥಿತಿಯಲ್ಲಿ ಬದುಕುವ ಸ್ವಾರ್ಥಿ ಮನುಷ್ಯನ ಕೈಯಲ್ಲಿ ಪ್ರಕೃತಿ ಮಾತೆ ಇದುವರೆಗೆ ಅನುಭವಿಸಿದ ಯಾತನೆಗೆಲ್ಲ ಉತ್ತರವೋ ಎಂಬಂತೆ... ಮನುಷ್ಯನ ದುರಹಂಕಾರವನ್ನು ಇಳಿಸಲೆಂದೇ ಪ್ರಕೃತಿ ಮಾಡಿದ ಉಪಾಯವೊ ಎಂಬಂತೆ ಜಗತ್ತಿನ ಸಧ್ಯದ ಪರಿಸ್ಥಿತಿ ಇದೆ... ಜಗತ್ತಿನ ಎಲ್ಲ ಜೀವಿಗಳೂ ಒಂದೇ ಅನ್ನುವ ಭಾವನೆಯೇ ಇಲ್ಲದ, ಎಲ್ಲಾ ಜೀವಿಗಳಿಗೂ ಈ ಜಗತ್ತಿನಲ್ಲಿ ಸಮಾನ ಅವಕಾಶ ಇದೆ, ಮನುಷ್ಯನೇ ಬಲಶಾಲಿ, ಬುದ್ಧಿವಂತ ಅಲ್ಲ, ಕಣ್ಣಿಗೇ ಕಾಣದ ಅಲ್ಪ ಜೀವಿಗಳಿಂದಲೂ  ಮನುಷ್ಯ ನರಳಿ ಸಾಯಬಹುದು, ಅಸಹಾಯಕನಾಗಿ ಶರಣಾಗಬಹುದು ಎಂಬ ಪಾಠವನ್ನು ಕೊರೋನಾ ಎಂಬ ಮಹಾಮಾರಿಯ ಮೂಲಕ ಪ್ರಕೃತಿ ನಮಗೆ ಪಾಠ ಕಲಿಸಿತೇ..? 

ಅಂತೂ ಈ ಬಾರಿಯ ಪರಿಸರ ದಿನಾಚರಣೆಗೆ  "ಜೀವ ವೈವಿಧ್ಯ" ಅಂದರೆ ಬಯೋ ಡೈವರ್ಸಿಟಿ ಎಂಬುದೇ  ಅರ್ಥಪೂರ್ಣ ಥೀಮ್ ... 

ಇದನ್ನೆಲ್ಲಾ ನೋಡುವಾಗ ನನಗೆ ಥಟ್ಟನೆ ನೆನಪಿಗೆ ಬರೋದು  ಈಶಾವಾಸ್ಯೋಪನಿಷತ್ತಿನ  ಈ ಶ್ಲೋಕ...

"ಈಶಾವಾಸ್ಯಂ ಇದಂ ಸರ್ವಂ ಯತ್ ಕಿಞ್ಚ ಜಗತ್ಯಾಂ ಜಗತ್| ತೇನ ತ್ಯಕ್ತೇನ ಭುಞ್ಜಿಥಾಃ ಮಾ ಗೃಧಃ ಕಸ್ಯ ಸ್ವಿದ್ ಧನಮ್" 

ಜಗತ್ತಿನಲ್ಲಿ ಯಾವ ಯಾವುದೆಲ್ಲಾ ಇದೆಯೋ ಅದೆಲ್ಲಾ ಈಶ್ವರನಿಂದ ತುಂಬಿದೆ. ಆದ್ದರಿಂದ ತ್ಯಾಗ ಮಾಡಿ ಉಣ್ಣಬೇಕು-ಬದುಕಬೇಕು. ಅತಿಯಾಸೆ ಬೇಡ. ಧನವು ಯಾರದ್ದು?   ಎಂಬ ಅರ್ಥ ಸ್ಪುರಿಸುವ ಈ ಶ್ಲೋಕಕ್ಕಿಂತ ಈ ಸಂದರ್ಭದಲ್ಲಿ ಉದಾತ್ತ ಚಿಂತನೆ ಬೇರೆ ಬೇಕೇ..?

#ಅನಂತಕುಮಾರಹೆಗಡೆ

Related posts