ಗುರು ಪೂರ್ಣಿಮೆ...
ಇಂದು ಆಷಾಢ ಮಾಸದ ಹುಣ್ಣಿಮೆ- ಮಹರ್ಷಿ ಕೃಷ್ಣ ದ್ವೈಪಾಯನರ ನೆನೆಪಿಗಾಗಿ ಗುರು ಪೂರ್ಣಿಮೆ...
ಕೃಷ್ಣ ದ್ವೈಪಾಯನರೆಂದರೆ ಬಹುತೇಕ ಜನಸಾಮಾನ್ಯರಿಗೆ ಅರ್ಥ ಆಗುವುದಿಲ್ಲ... ಆದರೆ ಅದೇ ವೇದವ್ಯಾಸರೆಂದರೆ ಎಲ್ಲರಿಗೂ ತುಂಬಾ ಪರಿಚಿತ ಹೆಸರು..! ಅದೇ ರೀತಿ ಈತ "ಜಯ" ಎಂಬ ಕಾವ್ಯವನ್ನು ರಚಿಸಿದರು ಅಂದರೂ ಬಹುತೇಕರಿಗೆ ಇದು ಅರ್ಥ ಆಗುವುದಿಲ್ಲ... ಹೌದು... ವೇದವ್ಯಾಸ ಎಂಬ ಮಹಾಜ್ಞಾನಿ ಕವಿ ರಚಿಸಿದ ಮೂಲ ಮಹಾಭಾರತ ಕಾವ್ಯದ ಮೂಲ ಹೆಸರು "ಜಯ" ಎಂದೇ . ಇದೆ ಕಾವ್ಯ ಪಠ್ಯ "ಜಯ" ಕ್ಕೆ ಆಖ್ಯಾನಗಳು, ಉಪಾಖ್ಯಾನಗಳೆಲ್ಲಾ ಸೇರಿ ಜಗತ್ತಿನಲ್ಲೇ ಅತೀ ಬೃಹತ್ ಕಾವ್ಯವಾಗಿ "ಮಹಾಭಾರತ" ಎಂಬ ಹೆಸರು ಪಡೆಯಿತು. ಪಾಶ್ಚ್ಯಾತ್ಯರು ಮಹಾಕಾವ್ಯಗಳೆಂದು ಹೆಮ್ಮೆಯಿಂದ ಬೀಗುವ ಗ್ರೀಕ್ ಜಾನಪದ ಕಾವ್ಯಗಳಾದ ಹೋಮರನ ಇಲಿಯಡ್ ಮತ್ತು ಒಡಿಸ್ಸೀ ಇವೆರಡನ್ನೂ ಒಟ್ಟು ಸೇರಿಸಿದರೆ ಆಗುವುದು ಕೇವಲ ೨೭೮೦೩ ಸಾಲುಗಳು ಮಾತ್ರ ... ಆದರೆ ಮಹಾಭಾರತ ಕಾವ್ಯದಲ್ಲಿ ಹದಿನೆಂಟು ಪರ್ವಗಳಲ್ಲಿ ಒಟ್ಟು ಎರಡು ಸಾವಿರದ ನೂರು ಅಧ್ಯಾಯಗಳಲ್ಲಿ ಒಂದು ಲಕ್ಷ ಶ್ಲೋಕಗಳಿವೆ... ಹಾಗಾಗಿ ಇದು ಜಗತ್ತಿನಲ್ಲೇ ಅತೀ ಬೃಹತ್ ಕಾವ್ಯ... ಬೇರೆ ದೇಶಗಳ ಇತರ ಯಾವುದೇ ಮಹಾಕಾವ್ಯಗಳೂ ಕೂಡಾ ಇದರ ಹತ್ತಿರಕ್ಕೂ ಬರುವುದಿಲ್ಲ... ಹಾಗಾಗಿಯೇ ವೇದವ್ಯಾಸರು ಕವಿಶ್ರೇಷ್ಠರೆನ್ನಿಸಿಕೊಳ್ಳುತ್ತಾರೆ... ಮಹಾಭಾರತ ನಡೆದ ಕಾಲಮಾನವನ್ನು ಮಹಾಭಾರತದಲ್ಲಿ ನಡೆದ ಘಟನೆಗಳ ಪ್ರಕಾರವೇ ಅಂದಾಜು ಮಾಡುವುದಾದರೆ... ಮಹಾಭಾರತದಲ್ಲಿ ಉಲ್ಲೇಖಿತವಾದ ಅಂತರಿಕ್ಷ ವಿದ್ಯಮಾನಗಳನ್ನು ಆಧುನಿಕ ಖಗೋಳಶಾಸ್ತ್ರದ ಲೆಕ್ಕಾಚಾರದ ಪ್ರಕಾರವೇ ನೋಡುವುದಾದರೂ ಈ ಮಹಾಕಾವ್ಯದ ಅಂದಾಜು ಕಾಲಮಾನ ಕ್ರಿಸ್ತಪೂರ್ವ ಮೂರುಸಾವಿರ ವರ್ಷಗಳು..! ಅಂದರೆ ವೇದವ್ಯಾಸರು ಜಗತ್ತಿನ ಅತ್ಯಂತ ಪ್ರಾಚೀನ ಕವಿಗಳ ಪೈಕಿ ಓರ್ವರು...
ಅಂದಹಾಗೆ ವೇದವ್ಯಾಸರ ಜನನ ಕೂಡಾ ವಿಶಿಷ್ಟವೇ ... ವೇದಕಾಲದ ಪರಾಶರ ಮಹರ್ಷಿಗಳಿಗೂ ಮತ್ಸ್ಯಗಂಧಿ ಎಂದೇ ಹೆಸರಾದ ಬೆಸ್ತ ಕನ್ಯೆ ಸತ್ಯವತಿಗೂ ಜನಿಸಿದವರು... ಅವರ ಮೈಬಣ್ಣ ಕಡು ಕಪ್ಪಾದುದರಿಂದ ಅವರನ್ನು 'ಕೃಷ್ಣ' ಅಂತ ಕರೆಯಲಾಯಿತು... ಇವತ್ತಿನ ಉತ್ತರಪ್ರದೇಶದ ಜಲವಾ ಜಿಲ್ಲೆಯ ಕಲ್ಪಿ ಎಂಬ ಪ್ರದೇಶದಲ್ಲಿ ಹರಿಯುವ ಯಮುನಾ ನದಿಯ ನಡುವಿನ ದ್ವೀಪವೊಂದರಲ್ಲಿ ಇವರು ಜನಿಸಿದ್ದರಿಂದ 'ದ್ವೈಪಾಯನ' ಎಂಬ ಹೆಸರು ಬಂತು... ಹಾಗಾಗಿಯೇ ಆತ ಕೃಷ್ಣ-ದ್ವೈಪಾಯನ...! ಶ್ರುತಿಗಳೆಂಬ ಮೌಖಿಕ ಪರಂಪರೆಯ ಮೂಲಕ ತಲೆಮಾರುಗಳಿಂದ ತಲೆಮಾರುಗಳಿಗೆ ಹರಿದು ಬಂದ ವೇದಗಳೆಂಬ ಜ್ಞಾನ ಸಾಗರವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಚತುರ್ವೇದಗಳನ್ನಾಗಿಸಿದ್ದರಿಂದಲೇ ಅವರಿಗೆ ವೇದವ್ಯಾಸರೆಂಬ ಹೆಸರು ಬಂತು ಎಂಬ ಪ್ರತೀತಿಯೂ ಇದೆ... ಮಹಾಭಾರತ ಎಂಬ ಈ ಮಹಾಕಾವ್ಯದ ಜೊತೆಗೆಯೇ ಎಲ್ಲಾ ಹದಿನೆಂಟು ಪುರಾಣಗಳನ್ನು ರಚಿಸಿದ್ದೂ ವೇದವ್ಯಾಸರೇ ಎಂಬ ಮಾತೂ ಇದೆ...
ಇಂಥಾ ಮಾಹಾಜ್ಞಾನಿಯ ಹುಟ್ಟು ಹಬ್ಬಬವನ್ನೇ ಗುರು ಪೂರ್ಣಿಮೆ ಎಂದು ಪರಿಗಣಿಸಿ ಗುರುಗಳನ್ನೆಲ್ಲ ಗೌರವಿಸುವ ಮಹಾನ್ ಪರಂಪರೆ ನಮ್ಮ ದೇಶದ್ದು...
ಅಂದ ಹಾಗೆ ಈ "ಗುರು" ಎಂಬ ಎರಡಕ್ಷರದ ಚಿಕ್ಕ ಪದಕ್ಕೆ ವಿಶಾಲವಾದ, ವಿಸ್ತಾರವಾದ ಅರ್ಥ ವ್ಯಾಪ್ತಿಯಿದೆ... 'ಗುರು' ಎಂದರೆ ಅದು ಬಹಳ ಘನವಾದದ್ದು, ಬಹಳ ಬೃಹತ್ತಾದದ್ದು, ಭಾರೀ ಗಾತ್ರದ್ದು ಬಹಳ ಭಾರವಾದದ್ದು, ತೂಕದ್ದು, ಅದಕ್ಕೆ ಬೇರೆ ಸಮತೂಕದ ಇನ್ನೊಂದು ಸಮಾನಾಂತರ ಪದ, ಪರ್ಯಾಯ ಪದವೇ ಇಲ್ಲ... ಗುರು ಎಂಬ ಪದಕ್ಕೆ ಬೇರೆ ನಿರುಕ್ತಿಗಳೂ, ಹಲವಾರು ವ್ಯುತ್ಪತ್ತಿಗಳೂ ಇವೆ...
ಗುಕಾರಸ್ತ್ವಂಧಕಾರಸ್ತು ರುಕಾರಸ್ತೇಜ ಉಚ್ಯತೆ
ಅಂಧಕಾರ ನಿರೋಧತ್ವಾತ್ ಗುರುರಿತ್ಯಭಿಧೀಯತೆ
ಎಂಬ ಈ ಶ್ಲೋಕ ಗುರುವಿನ ಅರ್ಥವನ್ನು ಸರಳವಾಗಿ ತಿಳಿಸುತ್ತದೆ... 'ಗು' ಕಾರವು ಅಂಧಕಾರವನ್ನು ಬಿಂಬಿಸುತ್ತದೆ... ಅದೇ ರೀತಿ 'ರು' ಕಾರವು ತೇಜಸ್ಸನ್ನು, ಬೆಳಕನ್ನು ಪ್ರತಿಬಿಂಬಿಸುತ್ತದೆ... ಯಾವನು ಅಂಧಕಾರವನ್ನು ನಿರೋಧಿಸಿ, ಅದನ್ನು ಹೋಗಲಾಡಿಸಿ ಬೆಳಕನ್ನು ತರುತ್ತಾನೋ ಅವನೇ 'ಗುರು'..! ಅಂದರೆ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನಿತ್ತು ನಮ್ಮ ಜೀವನವನ್ನು ಬೆಳಗಿಸಿ ಧರ್ಮದೆಡೆಗೆ ಕರೆದೊಯ್ಯುತ್ತಾನೊ ಅವನೇ 'ಗುರು' ... ಈ 'ಗುರು' ಎಂಬ ಪದಕ್ಕೆ ಸಂವಾದಿಯಾದ ಬೇರೆ ಪದಗಳು ಈ ಜಗತ್ತಿನಲ್ಲೇ ಇಲ್ಲ... ಗುರು ಎಂದರೆ ಕೇವಲ ವಿದ್ಯೆ ಕಲಿಸುವ ಶಿಕ್ಷಕ ಅಲ್ಲ... ಆಚಾರ್ಯ ಮಾತ್ರ ಅಲ್ಲ... ಆತ ನಮ್ಮ ಹೃದಯ ಮನಸ್ಸುಗಳ ಅಂಧಕಾರವನ್ನು ಹೊಡೆದಟ್ಟಿ ಜ್ಞಾನದ, ಧರ್ಮದ ದೀವಿಗೆ ಹಚ್ಚಿಡುವಾತ... ನಮ್ಮ ಬದುಕಿಗೊಂದು ದಿಕ್ಕು ತೋರಿಸುವಾತ... ನಮ್ಮ ಬಾಳ ಗುರಿಯನ್ನು ನಿರ್ದೇಶಿಸುವಾತ... ನಮ್ಮ ವೇದಕಾಲೀನ ಗುರು-ಶಿಷ್ಯ ಪರಂಪರೆ... ಗುರುಕುಲಗಳ ಪರಿಕಲ್ಪನೆ ಜಗತ್ತಿಗೆ ಮಾದರಿ...
ಆದರೇ ... ಈಗ ಈ ಗುರು ಎಂಬ ಶಬ್ದ ತೀರಾ ವ್ಯಾವಹಾರಿಕವಾಗಿದೆ... ಅರ್ಥ ಕಳೆದುಕೊಂಡಿದೆ... ಅನರ್ಥಕಾರಿಯಾಗಿ ಬಳಕೆಯಲ್ಲಿದೆ... ಬೆಂಗಳೂರಿನ ಪ್ರತೀ ಬೀದಿಗಳಲ್ಲಿನ ಮೂಲೆ ಮೂಲೆಗಳಲ್ಲೂ ಮಾತು ಮಾತಿಗೆ... "ಗುರೂ...ಗುರೂ...." ಎಂಬ ಚೀತ್ಕಾರ.. ಆರ್ತನಾದಗಳು ಕೇಳಿಸುತ್ತಿದೆ...! ಎಲ್ಲರೂ ಎಲ್ಲರಿಗೂ 'ಗುರೂ" ಅಂತ ಕರೆಯುವ ಹುಚ್ಚು ವಾಡಿಕೆಯಾಗಿದೆ... ಅದು ಹೋಗಲಿ... ಅತ್ತ ಪಾಶ್ಚಾತ್ಯರೂ ಈ ಗುರು ಎಂಬ ಶಬ್ದವನ್ನು ಯಾವುದೇ ವಿವೇಚನೆಯಿಲ್ಲದೆ ಬಳಸುತ್ತಾರೆ... ಹಾಗಾಗಿಯೇ...ಇವತ್ತು "ಬಿಸಿನೆಸ್ ಗುರು" "ಫ್ಯಾಶನ್ ಗುರು" "ಬ್ರಾಂಡ್ ಗುರು" ಅಂತೆಲ್ಲ ವಿಕೃತ ಬಳಕೆಗಳು ಹಾಸುಹೊಕ್ಕಾಗಿವೆ... ನಮ್ಮ ಪರಂಪರೆ ಅಪಮೌಲ್ಯಗೊಳ್ಳತೊಡಗಿದೆ...
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:,
ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:
ಗುರು ಎಂಬ ಪದಕ್ಕೆ ನಾವು ದೇವರ ಸ್ಥಾನಮಾನ ಕೊಟ್ಟವರು... ಗುರು ಎಂಬುದು ಖಂಡಿತಾ 'ಲಘು' ಅಲ್ಲ... ಹಾಗಾಗಿ 'ಗುರು' ಎಂಬ ಪದದ ಗೌರವ ಕಾಪಾಡುವ 'ಗುರುತರ' ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ... 'ಗುರು' ಎಂಬುದು ಬ್ರಹ್ಮ ಸ್ವರೂಪ.... ಆತ "ಪರಮ ಗುರು"... ಆತ "ಪರಾತ್ಪರ ಗುರು" .... ಆತ ಸರ್ವಶ್ರೇಷ್ಠ "ಪರಮೇಷ್ಠಿ ಗುರು".... ಆತ ಜ್ಞಾನ ಪೂರ್ಣ... ಹಾಗಾಗಿ ಪೂರ್ಣ ಸ್ವರೂಪ... ವೃತ್ತ ಎಂಬುದು ಪೂರ್ಣ ಸ್ವರೂಪವನ್ನು ಪ್ರತಿನಿಧಿಸುವಂಥದ್ದು... "ವ್ಯಾಸ" ಅಂದರೆ ಯಾವುದೇ ವೃತ್ತದ ಕೇಂದ್ರಬಿಂದುವಿನಿಂದ ವೃತ್ತದ ಅಂಚಿನ ಗೆರೆಯವರೆಗಿನ ಅಳತೆ... ಅಂದರೆ ವೃತ್ತವೊಂದನ್ನು ಅಳತೆ ಮಾಡುವುದಕ್ಕೆ ಉಪಯೋಗಿಸುವ ಮಾನದಂಡವೇ ...."ವ್ಯಾಸ" ...
"ವ್ಯಾಸ" ಅಂದರೆ ಪೂರ್ಣದೊಳಗಿನ ತತ್ವವನ್ನೂ ಸತ್ವವನ್ನೂ ಅಳತೆ ಮಾಡುವ ಸಾಧನ... ಹಾಗಾಗಿಯೇ ವೇದವ್ಯಾಸರಿಗೆ ತುಂಬಾ ಅನುರೂಪವಾದ ಹೆಸರು...! ಇವತ್ತಿನ ಈ ಪೂರ್ಣಿಮೆ ವ್ಯಾಸರ ಹೆಸರಿನಲ್ಲಿದೆ... ಹಾಗಾಗಿ ನಾವೆಲ್ಲಾ ಈ ಗುರು ಪೂರ್ಣಿಮೆಯಂದು ನಮಗೆ ಬದುಕಿನ ಪಾಠ ಹೇಳಿದ ಎಲ್ಲರನ್ನೂ... ಸ್ಮರಿಸೋಣ... ಅವರಿಗೆ ಕೃತಾರ್ಥರಾಗೋಣ...