ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು !
ಬಿಳಿಬಣ್ಣದ ವಿದೇಶೀಯರೂ ಅರಿತು ಆರಾಧಿಸಿದ್ದರು... ಕಪ್ಪು ಮೈಬಣ್ಣದ ನಮ್ಮ ಶ್ರೀಕೃಷ್ಣನನ್ನು ...!
ಗೋಕುಲಾಷ್ಟಮಿಯ ದಿನದಂದು... ಅರಿಯೋಣ ಕ್ರಿಸ್ತಪೂರ್ವದ ಈ ಕುತೂಹಲದ ಕತೆಯನ್ನು...!
ಸನಾತನ ಭಾರತೀಯರಲ್ಲಿ ವರ್ಣ ದ್ವೇಷದ ಭಾವನೆ ಯಾವತ್ತಿಗೂ ಇರಲಿಲ್ಲ...ಮೈಯ ಬಣ್ಣ ಯಾವುದಿದ್ದರೂ ಬಾಹ್ಯ ರೂಪವನ್ನು ನಿರ್ಲಕ್ಷಿಸಿ, ವ್ಯಕ್ತಿಯ ಆಂತರಿಕ ಆಧ್ಯಾತ್ಮಿಕ ಸೌಂದರ್ಯವನ್ನಷ್ಟೇ ಆರಾಧಿಸುವುದು, ಗೌರವಿಸುವುದು ನಮ್ಮ ಸನಾತನದ ಶ್ರೇಷ್ಠ ಪರಂಪರೆಯಾಗಿತ್ತು. ಆದುದರಿಂದಲೇ ಮಹಾಭಾರತ ಮಹಾಕಾವ್ಯ ರಚಿಸಿದ ಕವಿಯ ಮೈಬಣ್ಣ ಕಡು ಕಪ್ಪಾದರೂ, ಅದರಿಂದಾಗಿಯೇ ಆತನಿಗೆ 'ಕೃಷ್ಣದ್ವೈಪಾಯನ' ಎಂಬ ಹೆಸರು ಬಂದರೂ, ನಮ್ಮ ಸನಾತನ ಭಾರತೀಯರು ಆತನಲ್ಲಿನ ಜ್ಞಾನಕ್ಕೆ ಮನ್ನಣೆ ನೀಡಿದರೇ ಹೊರತು ಮೈಬಣ್ಣಕ್ಕಲ್ಲ...ವೇದಗಳ ಜ್ಞಾನಭಂಡಾರವನ್ನೆಲ್ಲ ಅಂತರ್ಗತ ಮಾಡಿಕೊಂಡು ಅವುಗಳನ್ನೇ ವಿಭಾಗಿಸಬಲ್ಲಷ್ಟು ಪಾಂಡಿತ್ಯ ಹೊಂದಿದ್ದ ಕಪ್ಪು ಮೈಬಣ್ಣದ 'ಕೃಷ್ಣದ್ವೈಪಾಯನ ಎಂಬ ಹೆಸರಿನ ಮಹರ್ಷಿಯನ್ನು ನಾವು "ವೇದವ್ಯಾಸ" ಎಂಬ ಉಪಮೇಯವನ್ನಿತ್ತು ಸಂಭ್ರಮಿಸಿದೆವು. ಹಾಗಾಗಿ ಮೈಬಣ್ಣ ಅನ್ನುವುದು ನಮ್ಮ ಭಾರತೀಯ ಪರಂಪರೆಯಲ್ಲಿ ಯಾವತ್ತಿಗೂ ಯೋಗ್ಯತೆಯ ಅಳತೆಯ ಮಾನದಂಡವಾಗಿರಲೇ ಇಲ್ಲ... ಆ ವರ್ಣ ದ್ವೇಷದ ಪರಿಕಲ್ಪನೆ ಹುಟ್ಟಿದ್ದು ಮತ್ತು ಪಸರಿಸಿದ್ದು ಪಾಶ್ಚಾತ್ಯ ಮತ್ತು ಮಧ್ಯ ಪ್ರಾಚ್ಯದ ದೇಶಗಳಲ್ಲಿ ಮತ್ತು ಭಾರತಕ್ಕೆ ವಕ್ಕರಿಸಿದ್ದೂ ಅಲ್ಲಿಂದಲೇ...
ಭಗವಾನ್ ಶ್ರೀ ಕೃಷ್ಣ ನಮ್ಮ ಸನಾತನ ಭಾರತೀಯರು ಹೊಂದಿದ್ದ ಮುಕ್ತ ಮನಸ್ಸಿಗೆ ಮತ್ತೊಂದು ಉದಾಹರಣೆ.. ಅಷ್ಟೇ ಅಲ್ಲ ನಮ್ಮ ಸನಾತನ ಹಿಂದೂ ಧರ್ಮೀಯರು ಗೌರವಿಸಿ, ಆರಾಧಿಸಿ ಪೂಜಿಸಿದ ಅಷ್ಟೂ ದೇವರುಗಳ್ಯಾರೂ ಅತೀ ಶ್ರೇಷ್ಠ ಜಾತಿಗಳಲ್ಲಿ ಹುಟ್ಟಿ, ಪೂಜನೀಯರಾದವರಲ್ಲ... ಭಗವಾನ್ ಮಹಾವಿಷ್ಣುವಿನ ದಶಾವತಾರಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿರಿ.. ಭಗವಂತ ಆನೆ, ಹುಲಿ, ಸಿಂಹಗಳಂಥಾ ಶ್ರೇಷ್ಠ ಬಲಶಾಲಿ ಪ್ರಾಣಿಗಳ ಅವತಾರ ತಾಳಲಿಲ್ಲ... ಬದಲಿಗೆ ಮೀನು, ಆಮೆ, ಹಂದಿಯ ರೂಪ ತಳೆದ ...! ಇಲ್ಲಿ ಶ್ರೇಷ್ಠತೆಯ ವಿಚಾರವಿರಲಿಲ್ಲ... ಬದಲಿಗೆ ಕಾರ್ಯ-ಕಾರಣ ಸಂಬಂಧಕ್ಕಷ್ಟೇ ಪ್ರಾಮುಖ್ಯತೆ ಇತ್ತು.. ಅದೇ ರೀತಿ ಸಾಕ್ಷಾತ್ ಶ್ರೀವಿಷ್ಣುವಿನ ಅವತಾರವಾದ ಶ್ರೀರಾಮಚಂದ್ರ ಕ್ಷತ್ರಿಯ ಕುಲದಲ್ಲಿ ಜನಿಸಿದ್ದರೆ ಶ್ರೀಕೃಷ್ಣ ಕಪ್ಪು ಮೈಬಣ್ಣದ ದನಕಾಯುವ ಗೋಪಾಲಕ. ಭಗವಾನ್ ವಿಷ್ಣುವಿನ ಹತ್ತು ಅವತಾರಗಳಲ್ಲಿ ವಾಮನ ಮತ್ತು ಪರಶುರಾಮರಷ್ಟೇ ಬ್ರಾಹ್ಮಣರು...! ಆದರೆ ಬ್ರಾಹ್ಮಣನಾಗಿ ಹುಟ್ಟಿದ ಭಗವಂತನಿಗೆ ಆರಾಧನೆ ಹೆಚ್ಚುನಡೆಯಲೇ ಇಲ್ಲಿಲ್ಲ..! ಹಾಗಾಗಿಯೇ ವಾಮನಾವತಾರಕ್ಕೂ ಪರಶುರಾಮಾವತಾರಕ್ಕೂ ಪ್ರತ್ಯೇಕ ದೇವಾಲಯಗಳಿಲ್ಲ... ಆದರೆ ಶ್ರೀ ರಾಮನಿಗೂ, ಶ್ರೀ ಕೃಷ್ಣನಿಗೂ ಅದೆಷ್ಟೊಂದು ದೇವಾಲಯಗಳು,ಅದೆಷ್ಟು ಸಂಭ್ರಮದಿಂದ ನಾವು ಉತ್ಸವಗಳನ್ನು ಆಚರಿಸುತ್ತೇವೆ...! ಉತ್ಸಾಹದಿಂದ ಆರಾಧಿಸುತ್ತೇವೆ... ಅದೇ ವೇಳೆ ನರಸಿಂಹಾವತಾರದ ಕೈಯಿಂದ ಸಂಹಾರವಾದ ಹಿರಣ್ಯ ಕಶಿಪುವಾಗಲೀ ಶ್ರೀರಾಮನಿಂದ ಹತನಾದ ದಶಕಂಠ ರಾವಣನಾಗಲೀ ನಿಮ್ನ ವರ್ಗಳಲ್ಲಿ ಜನಿಸಿದವರಲ್ಲ.. ಬದಲಿಗೆ ಅವರಿಬ್ಬರೂ ಬ್ರಾಹ್ಮಣರು...! ಹೀಗೆ ಹುಟ್ಟಿನಿಂದ ಬ್ರಾಹ್ಮಣರೇ ಆದರೂ ಪವೃತ್ತಿಯಿಂದ ರಾಕ್ಷಸರಾದ ಹಿರಣ್ಯಕಶಿಪು ಮತ್ತು ರಾವಣ ಭಗವಂತನಿಂದ ಹತರಾದರು...
ಭಗವಾನ್ ಶ್ರೀ ಕೃಷ್ಣನ ಮೈಬಣ್ಣ ಕಡು ಕಪ್ಪಾದುದರಿಂದಲೇ ಆತನಿಗೆ ;ಕೃಷ್ಣ' ಎಂಬ ಹೆಸರು ಬಂತು ಎಂಬುದು ಒಂದು ವಿವರಣೆ. ಆದರೆ ಕಪ್ಪು ವರ್ಣದ ಮೈಬಣ್ಣ ಆತ ದೇವಾರಾಗುವುದನ್ನು ತಪ್ಪಿಸಲಿಲ್ಲ... ಆತನ ಆರಾಧನೆಗೆ ಅಡ್ಡಿಯಾಗಲಿಲ್ಲ... ಆತ ಯಾದವ ಕುಲದಲ್ಲಿ ಜನಿಸಿದ ಗೋಪಾಲಕ ಎಂಬುದೇ ಸತ್ಯವಾದರೂ ಆತನ ಸ್ತುತಿ ಹಾಡಿದ್ದು... ಆರಾಧನೆ ಮಾಡಿದ್ದು... ಪೂಜೆ ಪುನಸ್ಕಾರಗಳನೆಲ್ಲಾ ಕೈಗೊಂಡದ್ದು ಬ್ರಾಹ್ಮಣರೇ ಅಲ್ಲವೇ..? ಹಾಗಾಗಿ ಇಲ್ಲೆಲ್ಲೂ ಜನಿಸಿದ 'ವರ್ಣ'... ಮೈಗಂಟಿದ ಚರ್ಮದ 'ವರ್ಣ' ಸ್ಥಾನ ನಿರ್ಣಯ ಮಾಡಲಿಲ್ಲ...
ಅಂದ ಹಾಗೆ.. ಕಪ್ಪು ಮೈಬಣ್ಣದ ನಮ್ಮ ಕೃಷ್ಣನನ್ನು ಬಿಳಿಬಣ್ಣದ ವಿದೇಶೀಯರೂ ಆರಾಧಿಸಿದರು ಅಂತನ್ನೋ ರೀತಿಯ ನಾನಿತ್ತ ಶೀರ್ಷಿಕೆಯನ್ನು ಓದಿದಾಗ ಬಹುತೇಕ ನಿಮ್ಮ ಮನಸ್ಸಿನಲ್ಲಿ ಮೂಡಿ ಬರುವ ಚಿತ್ರವನ್ನು ನಾನು ಊಹಿಸಬಲ್ಲೆ... ಹೆಚ್ಚಿನೆಲ್ಲರೂ 'ಹರೇ ರಾಮಾ ...ಹರೇ ಕೃಷ್ಣಾ .." ಅಂತ ಭಜನೆ ಮಾಡುವ ವಿದೇಶೀ ಇಸ್ಕಾನ್ ಭಕ್ತರ ಬಗ್ಗೆಯೇ ಯೋಚಿಸುತ್ತಾರೆ...! ಅದು ತೀರಾ ಸಹಜ ಕೂಡಾ.. International Society for Krishna Consciousness (ISKCON) ಎಂಬ ಅಭೂತಪೂರ್ವ ಸಂಘಟನೆಯ ಮೂಲಕ "ಕೃಷ್ಣ ಪ್ರಜ್ಞೆ"ಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಿದ ಅಭಯ ಚರಣಾರವಿಂದ ಭಕ್ತಿವೇದಾಂತ ಸ್ವಾಮೀ ಅವತಾರ ಮತ್ತೊಂದು ಸಾಧಕ ನಾಮ ಶ್ರೀಲಾ ಪ್ರಭುಪಾದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಭಾರತೀಯ ಭಕ್ತಿ ಪಂಥದ ಪ್ರಮುಖ ಹರಿಕಾರರಲ್ಲಿ ಅದ್ವಿತೀಯರು ಶ್ರೀಲಾ ಪ್ರಭುಪಾದರು.. ಆದರೆ ಶ್ರೀಲಾ ಪ್ರಭುಪಾದರು ಭಗವಾನ್ ಶ್ರೀಕೃಷ್ಣನನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸುವುದಕ್ಕೆ ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆಯೇ ನಮ್ಮ ಕಡುಕಪ್ಪು ಬಣ್ಣದ ಕೃಷ್ಣ ಬಿಳೀಮೈಬಣ್ಣದ ವಿದೇಶೀಯರ ಆರಾಧ್ಯ ದೈವವಾಗಿದ್ದ..!
ಇದು ಅತ್ಯಂತ ಕುತೂಹಲಕರ ಕತೆ... ನಮ್ಮ ದೇಶದ ಕಾಂಗ್ರೆಸ್ ಪ್ರಣೀತ ಕಮ್ಯುನಿಷ್ಠ್ ಇತಿಹಾಸ ಪಠ್ಯಗಳಲ್ಲಿ ನಮೂದಿಸದೇ ಇರುವ ಕ್ರಿಸ್ತಪೂರ್ವದ ಐತಿಹಾಸಿಕ ಕತೆ..! ಭಾರತಕ್ಕೆ ಗ್ರೀಕ್ ದೊರೆ ಅಲೆಕ್ಸಾಂಡರ್ ಮಾತ್ರ ದಂಡೆತ್ತಿ ಬಂದದ್ದಲ್ಲ... ಅಲೆಕ್ಸಾಂಡರನ ನಂತರವೂ ಭಾರತಕ್ಕೆ ಹಲವಾರು ಗ್ರೀಕರು ದಂಡೆತ್ತಿ ಬಂದದರು. ಅಷ್ಟೇ ಅಲ್ಲ ಅವರ ಪೈಕಿ ಹಲವಾರು ಮಂದಿ ಇಲ್ಲಿಯೇ ಚಿಕ್ಕಪುಟ್ಟ ರಾಜ್ಯಗಳನ್ನು ನಿರ್ಮಿಸಿಕೊಂಡು ತಮ್ಮದೇ ನಾಣ್ಯಗಳನ್ನು ಟಂಕಿಸಿಕೊಂಡು ಇಲ್ಲೇ ಬದುಕಿದರು... ಮತ್ತು ಇಲ್ಲಿನ ಧರ್ಮ ಸಂಸ್ಕೃತಿಗಳ ಜೊತೆಗೆಯೇ ಸೇರಿ ಬೆರೆತು ಹೋದರು. ಹಲವಾರು ಗ್ರೀಕರು ಬೌದ್ಧ ಧರ್ಮವನ್ನು ಅನುಸರಿಸಿದರೆ ಇನ್ನೂ ಹಲವಾರು ಜನ ಹಿಂದೂ ಧರ್ಮವನ್ನು ಅಪ್ಪಿಕೊಂಡರು. ಈಗಿನ ಅಫಘಾನದ ಬಳಿಯಿರುವ ಬ್ಯಾಕ್ಟ್ರಿಯಾ ದಿಂದ ಹಿಡಿದು ಉತ್ತರ ಭಾರತದ ವರೆಗೆ ಈ ಗ್ರೀಕ್ ರಾಜ್ಯಗಳು ಹಬ್ಬಿದ್ದವು. ಕ್ರಿಸ್ತಪೂರ್ವ ೧೮೦ರಲ್ಲಿ ಗ್ರೀಕ್ ರಾಜ ಅಗಾತೋಕ್ಲೆಸ್ ಎಂಬಾತ ಮೊಟ್ಟಮೊದಲ ಬಾರಿಗೆ ವಾಸುದೇವ ಕೃಷ್ಣ ಮತ್ತು ಬಲರಾಮನ ಚಿತ್ರಗಳಿರುವ ನಾಣ್ಯಗಳನ್ನು ಟಂಕಿಸಿದ. ಬಹುಶಃ ಹಿಂದೂ ದೇವರುಗಳನ್ನು ಬಿಳಿದೊಗಲಿನ ವಿದೇಶೀಯರು ಆರಾಧಿಸತೊಡಗಿದ ಮೊಟ್ಟಮೊದಲ ಐತಿಹಾಸಿಕ ಪುರಾವೆ ಇದುವೇ ಇರಬೇಕು... ಇದಾದ ಬಳಿಕ ದೊರಕಿರುವ ಅತ್ಯಂತ ಪ್ರಾಚೀನ ದಾಖಲೆಯೆಂದರೆ ಹೀಲಿಯೋಡೋರಸ್ ನ ಸ್ಥಮ್ಭ. ಮಧ್ಯ ಪ್ರದೇಶದ ವಿದಿಶಾದಲ್ಲಿರುವ ಈ ಕಂಭ ಇತಿಹಾಸಕಾರರ ಪ್ರಕಾರ ಇದು ಪ್ರಾಚೀನ ವಾಸುದೇವ ಕೃಷ್ಣ ದೇವಾಲಯಒಂದರ ಭಾಗವಾಗಿದ್ದಿರಬಹುದು
ತಕ್ಷಶಿಲೆಯನ್ನು ಆಳುತ್ತಿದ್ದ ಗ್ರೀಕ್ ದೊರೆ ಆಂಟಿಯಾಲ್ಕಿಡಾಸ್ (ಅಮ್ತಾಲಿಕಿತ) ನ ರಾಯಭಾರಿಯಾಗಿ ಕಾಶಿಪುತ್ರ ಭಾಗಭದ್ರ ನ ಬಳಿಗೆ ಹೀಲಿಯೋಡೋರಸ್ ಬಂದ ವಿಷಯವನ್ನು ಈ ಕಂಭದಲ್ಲಿ ಕೆತ್ತಲಾಗಿದೆ. ವಿಶೇಷವೆಂದರೆ ಈ ಹೀಲಿಯೊಡೊರಸ್ " ಭಾಗವತ" ಅನ್ನುವ ಶಬ್ದವನ್ನು ಉಪಯೋಗಿಸಿದ್ದು ತನ್ನನ್ನುತಾನೆ "ಭಾಗವತ" ಅಂತ ಕರೆದುಕೊಂಡಿದ್ದಾನೆ...! ಬಹುಶಃ ವಿದೇಶೀ ಮೂಲದ ಗ್ರೀಸ್ ದೇಶದ ಬಿಳಿದೊಗಲಿನ ವ್ಯಕ್ತಿ ಆಗಿರುವಾತ ಹಿಂದೂ ಧರ್ಮಕ್ಕೆ ಸೇರಿದ, ಭಗವಾನ್ ಕೃಷ್ಣನ ಆರಾಧಕ ತಾನೆಂದು ತನ್ನನ್ನು ಕರೆದುಕೊಂಡ ಮೊಟ್ಟಮೊದಲ ಕತೆಯಾಗಿದೆ ... ಅಂದರೆ ಹಿಂದೂಧರ್ಮದಿಂದ ಆಕರ್ಷಿತನಾದ ವಿದೇಶೀ ಗ್ರೀಕ್ ವ್ಯಕ್ತಿಯೊಬ್ಬ ಹಿಂದೂ ಧರ್ಮಕ್ಕೆ ಮತಾಂತರವಾದ ಐತಿಹಾಸಿಕ ದಾಖಲೆಯೂ ಇದಾಗಿದೆ..
ಹೀಗೆ ವಿದೇಶೀ ಮೂಲದ ಹೀಲಿಯೋಡೋರಸ್ ಎಂಬ ಗ್ರೀಕ್ ವ್ಯಕ್ತಿ "ಭಾಗವತ" ನಾಗಿ "ವಾಸುದೇವ ಕೃಷ್ಣ"ನ ಆರಾಧಕನಾಗಿ, "ಭಾಗವತ" ಧರ್ಮದ ಪ್ರತಿಪಾದಕನಾಗಿ, ಪ್ರಚಾರಕನಾಗಿ ಬದಲಾದದ್ದು ಕ್ರಿಸ್ತಪೂರ್ವ ೧೧೩ ನೇ ಇಸವಿಯಲ್ಲಿ... ಅದಾದ ಬಳಿಕ ಅನೇಕ ವಿದೇಶೀ ಅರಸರು ಹಿಂದೂಧರ್ಮಕ್ಕೆ ಸ್ವೀಕರಿಸಿ . ಇಲ್ಲಿನ ಸಂಸ್ಕೃತಿಯ ಜೊತೆಗೆ ಬೆರೆತುಹೋದರು...ಇಲ್ಲಿನವರೇ ಆಗಿ ಹೋದರು..
ಗ್ರೀಕರ ಬಳಿಕ ಅವರಂತೆಯೇ ಹೊರಗಿನಿಂದ ಬಂದ ಕುಶಾನರೂ ಕೂಡಾ ಹಿಂದೂ ಧರ್ಮಕ್ಕೆ ಆಕರ್ಷಿತರಾದರು. ಕುಶಾನ ರಾಜಪರಂಪರೆಯ ಕೊನೆಯ ಬಹುಮುಖ್ಯ ರಾಜನೊಬ್ಬ ಹಿಂದೂ ಭಾಗವತಧರ್ಮಕ್ಕೆ ಮತಾಂತರವಾಗಿ ತನ್ನ ಹೆಸರನ್ನು "ವಾಸುದೇವ" ಅಂತಲೇ ಬದಲಿಸಿಕೊಂಡಿದ್ದ...
ಇತ್ತೀಚೆಗಿನ ದಿನಗಳಲ್ಲಿ, ಶ್ರೀಲಾ ಪ್ರಭುಪಾದರಂತಹ ಮಹನೀಯರು ಇಸ್ಕಾನ್ ಮೂಲಕ ವಿಶ್ವಾದ್ಯಂತ ಕೃಷ್ಣಪ್ರಜ್ಞೆಯನ್ನೂ ಆ ಮೂಲಕ ಹಿಂದೂ ಧರ್ಮವನ್ನೂ ಭಾರತೀಯ ಪರಂಪರೆಯನ್ನೂ ಪ್ರಸರಿಸಿದರು. ಇವತ್ತಿನ ದಿನ ವಿದೇಶೀಯರು ನಮ್ಮ ಕೃಷ್ಣನನ್ನು ಆರಾಧಿಸುತ್ತಾರೆ,,, ಪೂಜಿಸುತ್ತಾರೆ... ಪ್ರತೀ ಗೋಕುಲಾಷ್ಟಮಿಯಂದೂ ಕೃಷ್ಣನ 'ಬರ್ತ್ ಡೇ ' ಆಚರಿಸುತ್ತಾರೆ... ಕಪ್ಪು ಮೈಬಣ್ಣದ ಕೃಷ್ಣನನ್ನು ದೇವರೆಂದೇ ಆರಾಧಿಸುತ್ತಾರೆ...
ನೈಜ ಹಿಂದೂ ಹೃದಯಕ್ಕೆ ಬಣ್ಣದ ಹಂಗಿಲ್ಲ... ಇರಲೂ ಬಾರದು... ನಮ್ಮ ಕಡುವರ್ಣದ ಕೃಷ್ಣನನ್ನು ದೇವರಾಗಿ ಬಿಳಿಬಣ್ಣದ ವಿದೇಶೀಜನ ಸ್ವೀಕರಿಸಿದಂತೆಯೇ ನಾವೂ ಕೂಡಾ ಆ ಬಿಳಿಬಣ್ಣದ ವಿದೇಶೀ ಕೃಷ್ಣ ಭಕ್ತರನ್ನು ನಮ್ಮ ನಿಮ್ಮಂತಯೇ ಹಿಂದೂಗಳು ಅಂತ ಸ್ವೀಕರಿಸಬೇಕಿದೆ... ಹಾಗೆ ನಾವು ಅವರನ್ನು ತುಂಬು ಮನಸ್ಸಿನಿಂದ ಸ್ವೀಕರಿಸಿದರಷ್ಟೇ ಜಗತ್ತಿನಾದ್ಯಂತ ಹಿಂದೂ ಧರ್ಮ ವ್ಯಾಪಕವಾಗಿ ಹರಡಲು ಸಾಧ್ಯ ,,,ಅಲ್ಲವೇ..? ಹಾಗಾದಾಗ ಮಾತ್ರ ಹಿಂದೂ ಧರ್ಮ ಎಂಬುದು 'ವಿಶ್ವ ಹಿಂದೂ'ಧರ್ಮವಾಗಲು ಸಾಧ್ಯ ಅಲ್ಲವೇ..?
ಕೃಷ್ಣಮ್ ವಂದೇ ಜಗದ್ಗುರುಮ್
#ಅನಂತಕುಮಾರಹೆಗಡೆ