Infinite Thoughts

Thoughts beyond imagination

ಕಿತ್ತೂರಿನ ರಾಣಿ ಚೆನ್ನಮ್ಮನವರ ಜಯಂತಿ !

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಂತ ವೀರ ಸಾವರ್ಕರ್ ಯಾವ ಸಿಪಾಯಿ ದಂಗೆಯನ್ನು ಕರೆದರೋ, ಅದಾಗುವುದಕ್ಕಿಂತ ಸುಮಾರು ಐವತ್ತಾರು ವರ್ಷಕ್ಕೂ ಹಿಂದೆಯೇ ನಮ್ಮ ಹೆಮ್ಮೆಯ ಕಿತ್ತೂರಿನ ರಾಣಿ ಚೆನ್ನಮ್ಮಾಜಿಯವರ ಜನನವಾಗಿತ್ತು..! ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯವರು ಬ್ರಿಟಿಷರ ವಿರುದ್ಧ ಸಿಡಿದೇಳುವುದಕ್ಕೆ ಸುಮಾರು ಮೂವತ್ತಮೂರು ವರ್ಷಗಳಷ್ಟು ಹಿಂದೆಯೇ ನಮ್ಮ ಕಿತ್ತೂರಿನ ರಾಣಿ ಚೆನ್ನಮ್ಮ ಬ್ರಿಟಿಷರನ್ನು ಯುದ್ಧದಲ್ಲಿ ಸೋಲಿಸಿ ಬ್ರಿಟಿಷ್ ಕಲೆಕ್ಟರ್ ಸೈಂಟ್ ಜಾನ್ ಥ್ಯಾಕರೇ ಯನ್ನು ಕೊಂದಿದ್ದರು..! ಅಂದರೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕೆ ಮೂವತ್ತಮೂರು ವರ್ಷಗಳಿಗೂ ಹಿಂದೆಯೇ ನಮ್ಮ ರಾಜ್ಯದ ಕಿತ್ತೂರಿನ  ಚೆನ್ನಮ್ಮ ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು..! 
 
ಆಕೆ ತುಂಬಾ ಗಟ್ಟಿಗಿತ್ತಿ ಹೆಣ್ಣುಮಗಳು, ಯಾವುದಕ್ಕೂ ಎದೆಗುಂದದ ಧೈರ್ಯಶಾಲಿ. ೧೮೨೪ರಲ್ಲಿ ಆಕೆಯ ಗಂಡ ಮಲ್ಲರುದ್ರ ಸರ್ಜಾ ಕಾಲವಾದಾಗ ಆಕೆಗೆ ೪೬ ವರ್ಷ ವಯಸ್ಸು. ಅದೇ ವರ್ಷ ಆಕೆಯ ಒಬ್ಬನೇ ಮಗ ಕೂಡಾ ಮರಣವನ್ನಪ್ಪಿದ. ಎರಡೆರಡು ದುರಂತಗಳು ಮೇಲಿಂದ ಮೇಲೆ ಘಟಿಸಿದರೂ ಎದೆಗುಂದದ ರಾಣಿ ಚೆನ್ನಮ್ಮಾಜಿಯವರು ಅದೇ ವರ್ಷ  ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದು ಕಿತ್ತೂರಿನ ಪಟ್ಟಕ್ಕೆ ವಾರಸುದಾರರನ್ನಾಗಿ ನೇಮಿಸಿದರು. ಆದರೆ ಧಾರವಾಡದ ಕುತಂತ್ರಿ ಬ್ರಿಟಿಷ್ ಕಲೆಕ್ಟರ್ ಸೈಂಟ್ ಜಾನ್ ಥ್ಯಾಕರೇ, ಸುಮಾರು ಇಪ್ಪತ್ತೊಂದು ಸಾವಿರ ಸೈನಿಕರೊಂದಿಗೆ ಕಿತ್ತೂರಿನ ಮೇಲೆ ದಾಳಿ ನಡೆಸಿದ. ಒಂದೇ ವರ್ಷದೊಳಗಾಗಿ ತನ್ನ ಗಂಡನ ಮತ್ತು ಜೀವಕ್ಕೆ ಜೀವವಾಗಿದ್ದ ಏಕಮಾತ್ರ ಪುತ್ರನ ಸಾವಿನ ನೋವನ್ನೂ ನುಂಗಿಕೊಂಡ ಆ  ಹೆಣ್ಣುಮಗಳು ಧೃತಿಗೆಡದೆ, ಒಂದಿಷ್ಟೂ ಧೈರ್ಯಗುಂದದೇ ತನ್ನ ಸೈನ್ಯದ ದಂಡನಾಯಕ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಗುರುಸಿದ್ದಪ್ಪ ಮುಂತಾದ ಸಮರ್ಥ ಸೇನಾನಿಗಳೊಂದಿಗೆ ಬ್ರಿಟಿಷರ ದಾಳಿಯನ್ನು ಸಮರ್ಥವಾಗಿ ಎದುರಿಸಿ ಬ್ರಿಟಿಷರನ್ನು ಸೋಲಿಸಿದರು. ಯುದ್ಧದಲ್ಲಿ  ಥ್ಯಾಕರೇ ಸತ್ತ. ಆದರೆ ಬ್ರಿಟಿಷರು ಮತ್ತೆ ದಾಳಿ ಮಾಡಿದರು. ರಾಣಿ ಇನ್ನೊಮ್ಮೆ ಬ್ರಿಟಿಷರ ಭಾರೀ ಸೈನ್ಯವನ್ನೆದುರಿಸಿದರು. ಭೀಕರ ಯುದ್ಧದಲ್ಲಿ ಸೋಲಾಪುರದ  ಸಬ್ ಕಲೆಕ್ಟರ್ ಮನ್ರೋ ಹತನಾದ. ಎಷ್ಟೇ ವೀರಾವೇಶದಿಂದ ಹೋರಾಡಿದರೂ ಚೆನ್ನಮ್ಮ ಬ್ರಿಟಿಷ ಮುಂದೆ ಸೋಲೊಪ್ಪಿಕೊಂಡು ಅವರ ಬಂಧಿಯಾದರು. ಬೈಲಹೊಂಗಲದ ಕೋಟೆಯಲ್ಲಿ ರಾಣಿ ಚೆನ್ನಮ್ಮರನ್ನು ಸೆರೆಯಲ್ಲಿಡಲಾಯಿತು. ಸುಮಾರು ಐದು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ಚೆನ್ನಮ್ಮಾಜಿಯವರು ೧೮೨೯ನೇ ಇಸವಿಯಲ್ಲಿ ಕಾಲವಾದರು. 
 
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮಾಜಿಯವರು ತಮ್ಮ ಅಸಾಧಾರಣ ಧೈರ್ಯ ಸಾಹಸಗಳಿಂದ ಅಜರಾಮರರಾಗಿದ್ದಾರೆ. ಇವತ್ತು, ಅಕ್ಟೋಬರ್ ೨೩ ನೇ ತಾರೀಕು, ಅವರ  ೨೪೨ನೇ ಜನುಮದಿನ.  ಅವರ ಜೀವನದ ಬಗ್ಗೆ, ಬ್ರಿಟಿಷರ ಕುತಂತ್ರವನ್ನೆದುರಿಸಿ ಅವರ ವಿರುದ್ಧ ಹೋರಾಡಿ ಯುದ್ಧ ಗೆದ್ದ ಅವರ ಪರಾಕ್ರಮದ ಬಗ್ಗೆ ಇವತ್ತಿಗೂ ನಮ್ಮ ನಾಡಿನ ಮೂಲೆಮೂಲೆಗಳಲ್ಲೂ ಜನ ಲಾವಣಿಗಳನ್ನು, ಗೀಗೀ ಪದಗಳನ್ನು ಹಾಡುತ್ತಾ ಅವರನ್ನು ಸ್ಮರಿಸುತ್ತಿದ್ದಾರೆ. ನಮ್ಮ ನಾಡಿನ ಪ್ರತೀ ಮನೆಗಳಲ್ಲೂ ಕಿತ್ತೂರಿನ ರಾಣಿ ಚೆನ್ನಮ್ಮಾಜಿಯವರಂಥ ಹೆಣ್ಣುಮಗು ಜನಿಸಲಿ ಅಂತ ಹಾರೈಸುತ್ತಿದ್ದಾರೆ.. ಅವರಂಥ ವೀರ ವನಿತೆಯನ್ನು ಮಗಳಾಗಿ ಪಡೆದ ನಮ್ಮ ಕರುನಾಡು ಧನ್ಯ... 
 
ಕಿತ್ತೂರು ರಾಣಿ ಚೆನ್ನಮ್ಮನ ವೀರಗಾಥೆಯನ್ನು ನಮ್ಮ ಮಕ್ಕಳಿಗೆ ತಿಳಿಸೋಣ, ನಮ್ಮ ನಾಡಿನ, ನಮ್ಮ ದೇಶದ ವೀರಪರಂಪರೆಯ ಕಥೆಯನ್ನು, ವೀರವನಿತೆಯರ ಜೀವನಗಾಥೆಗಳನ್ನು ಮುಂದಿನ ತಲೆಮಾರುಗಳಿಗೆ ದಾಟಿಸೋಣ... 
 
ವೀರ ವನಿತೆ ರಾಣಿ ಚೆನ್ನಮ್ಮಾಜಿಯವರಿಗೆ ಶತಶತ ನಮನಗಳನ್ನು ಸಲ್ಲಿಸೋಣ...   

Related posts