ಶ್ರೀಮನ್ ಮಧ್ವಾಚಾರ್ಯ ಜಯಂತಿಯ ಶುಭಾಶಯಗಳು !
ಪೂರ್ಣಪ್ರಜ್ಞ ಸ್ವರೂಪ ಶ್ರೀಮನ್ ಮಧ್ವಾಚಾರ್ಯ ಜಯಂತಿಯ ಶುಭಾಶಯಗಳು
ಭಾರತೀಯ ವೇದಾಂತ ತತ್ವದರ್ಶನಕ್ಕೆ ಹಲವಾರು ಆಯಾಮಗಳಿವೆ. ಮಧ್ಯಯುಗದಲ್ಲಿ ಸನಾತನ ಧರ್ಮದ ತತ್ವಮಾರ್ಗಗಳ ಪುನರುತ್ಥಾನ ಮಾಡಿ ಉಪನಿಷತ್ತುಗಳು, ಬಾದರಾಯಣರ ಬ್ರಹ್ಮಸೂತ್ರ, ಭಗವದ್ಗೀತೆ ಹೀಗೆ ಈ ಮೂರೂ ಪ್ರಸ್ಥಾನತ್ರಯಗಳಿಗೆ ಪ್ರೌಢ ಭಾಷ್ಯಗಳನ್ನು ಬರೆದ ಮೂರೂ ಮಹಾ ಮೇಧಾವಿ ಯತಿವರೇಣ್ಯರೆಲ್ಲ ದಕ್ಷಿಣ ಭಾರತೀಯರೇ... ಅದರಲ್ಲೂ ದ್ವೈತ ಮಾರ್ಗದ ಆದ್ಯ ಪ್ರವರ್ತಕ ಪೂರ್ಣಪ್ರಜ್ಞ ಸ್ವರೂಪ ಶ್ರೀ ಮಧ್ವಾಚಾರ್ಯರು ನಮ್ಮ ಕರ್ನಾಟಕದ ಪುಣ್ಯನೆಲದಲ್ಲಿ, ಉಡುಪಿಯ ಬಳಿಯಿರುವ ಪಾಜಕ ಕ್ಷೇತ್ರದಲ್ಲಿ ೧೨೩೮ರಲ್ಲಿ ವಿಜಯದಶಮಿಯಂದು ಜನಿಸಿದರು. ಶ್ರೀಮಾನ್ ಮಧ್ವಾಚಾರ್ಯರು ತಮ್ಮ "ತತ್ವವಾದ" ಸಿದ್ಧಾಂತವನ್ನು ಭರತಖಂಡದಾದ್ಯಂತ ಪಸರಿಸಿದ್ದಲ್ಲದೆ, ತಮ್ಮ ಜೀವಿತಾವಧಿಯಲ್ಲಿ ಸುಮಾರು ೩೭ ತತ್ವ ದರ್ಶನ ಗ್ರಂಥಗಳನ್ನು ರಚಿಸಿ ಭಾರತೀಯ ತತ್ವ ಸಿದ್ಧಾಂತಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ದ್ವಾರಕೆಯಿಂದ ಭಗವಾನ್ ಕೃಷ್ಣನ ಬಿಂಬವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿ ಶ್ರೀಕೃಷ್ಣ ಮಠದ ಜೊತೆಗೆ ಅಷ್ಟಮಠಗಳನ್ನೂ ಸ್ಥಾಪಿಸಿ ಸನಾತನ ಹಿಂದೂ ಧರ್ಮದ ಪುನರುತ್ಥಾನ ಕೈಗೊಂಡ ಯತಿಶ್ರೇಷ್ಠರವರು. ಇಂದು ಭಾರತ ತತ್ವದರ್ಶನದಲ್ಲಿ ಉತ್ತರ ಮೀಮಾಂಸಾ ದರ್ಶನವೆಂದೇ ಖ್ಯಾತಿ ಪಡೆದ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶಂಕರ, ರಾಮಾನುಜ, ಮಧ್ವರನ್ನು ಆಚಾರ್ಯತ್ರಯರೆಂದೇ ಕರೆಯಲಾಗುತ್ತದೆ. ಅಂಥಾ ಆಚಾರ್ಯತ್ರಯರಲ್ಲೊಬ್ಬರಾದ ಶ್ರೀ ಮಧ್ವಾಚಾರ್ಯರ ಜಯಂತಿ ಇಂದು. ಮಧ್ವಜಯಂತಿಯ ಈ ಸಂದರ್ಭದಲ್ಲಿ ಆಚಾರ್ಯಶ್ರೇಷ್ಠರ ಚರಣಕಮಲಗಳಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಾ, ಅವರ ಅನಂತ ಶಿಷ್ಯಕೋಟಿಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ...
#ಅನಂತಕುಮಾರಹೆಗಡೆ #ಮಧ್ವಜಯಂತಿ #anantkumarahegde