Infinite Thoughts

Thoughts beyond imagination

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು!

ತಾಯಿ ನುಡಿಯಲ್ಲಿ ಪ್ರಾಥಮಿಕ ಶಿಕ್ಷಣವೆಂಬ ಬಹುಕಾಲದ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ....

ಮೋದೀಜಿಯವರ ನೂತನ ಶಿಕ್ಷಣ ನೀತಿ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ನೀಡುವ ಮಹತ್ತರ ಕೆಲಸ ಮಾಡಿದೆ.... 

ಅಚ್ಚಕನ್ನಡದ ಮೊತ್ತ ಮೊದಲ ರಾಜವಂಶವೆಂಬ ಕೀರ್ತಿಗೆ ಪಾತ್ರರಾದ ಕದಂಬರು ಮೊದಲು ನಮ್ಮದೇ ಬನವಾಸಿಯಿಂದ ತಮ್ಮ ರಾಜ್ಯಭಾರ ಪ್ರಾರಂಭಿಸಿದರು. ಹಾಗಾಗಿಯೇ ಕನ್ನಡ ರಾಜ್ಯದ ಮೊದಲ ರಾಜಧಾನಿ ನಮ್ಮ ಹೆಮ್ಮೆಯ ಬನವಾಸಿಯೇ..  ಸುಮಾರು ಇನ್ನೂರಾ ಹದಿನೈದು ವರ್ಷಗಳ ಕಾಲ ಕನ್ನಡ ಸಾಮ್ರಾಜ್ಯವನ್ನು ಆಳಿದ ಕದಂಬರು ರಾಜ ಮೃಗೇಶ ವರ್ಮನ ಕಾಲದಲ್ಲಂತೂ ಉತ್ತರದಲ್ಲಿ ನರ್ಮದಾ ನದಿಯ ಪಾತ್ರದವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದರು. ಭೌಗೋಳಿಕವಾಗಿ ಕನ್ನಡ ನೆಲದ ರಾಜರು, ಸಾಮ್ರಾಟರು ಬಹಳ ದೊಡ್ಡ ಭೂಭಾಗಗಳನ್ನು ಆಳಿದ ಉದಾಹರಣೆಯಿದೆ. ಬಾದಾಮಿಯ  ಚಾಲುಕ್ಯರು ನಾಸಿಕ್ ವರೆಗೂ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು. ಕಲ್ಯಾಣದ ಚಾಲುಕ್ಯರು  ದೇವಗಿರಿಯವರೆಗಿನ ಭೂ ಪ್ರದೇಶವನ್ನು ಆಳ್ವಿಕೆ ಮಾಡಿದ್ದರು. ಹೊಯ್ಸಳರು ಕೇರಳದ ಕಣ್ಣಾನೂರು ತಮಿಳುನಾಡಿನ ಕಂಚಿಯವರೆಗೂ ಕನ್ನಡಿಗರ ಅಧಿಪತ್ಯವನ್ನು ವಿಸ್ತರಿಸುವ ಕೆಲಸ ಮಾಡಿದ್ದರು.  ವಿಜಯನಗರದ ಕಾಲದಲ್ಲಂತೂ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಬಹುಭಾಗಗಳು ಕನ್ನಡಿಗರ ಆಳ್ವಿಕೆಗೊಳಪಟ್ಟಿತ್ತು. ಆದ್ರೆ ಸ್ವಾತಂತ್ರ್ಯಾನಂತರ ನಡೆದ ಭಾಷಾವಾರು ಪ್ರಾಂತ್ಯ ವಿಂಗಡಣೆಯ ಸಂದರ್ಭದಲ್ಲಿ ಮೊದಲು ವಿಶಾಲ ಮೈಸೂರು ರಾಜ್ಯ, ನಂತರ  ಕರ್ನಾಟಕ ರಾಜ್ಯವೆಂದಾದ ಬಳಿಕವೂ ನಾವು ಕಾಸರಗೋಡು ಹೊಸದುರ್ಗಗಳನ್ನು  ಕೇರಳಕ್ಕೂ, ಮಡಕಶಿರಾವನ್ನು ಆಂಧ್ರಕ್ಕೂ . ತಾಳವಾಡಿ ಉದಕಮಂಡಲಗಳನ್ನು ತಮಿಳುನಾಡಿಗೂ, ಸೊಲ್ಲಾಪುರವನ್ನು ಮಹಾರಾಷ್ಟ್ರಕ್ಕೂ ಬಿಟ್ಟುಕೊಡಬೇಕಾಯಿತು. ಇವೆಲ್ಲ ಕನ್ನಡ ಮಾತಾಡುವ ಪ್ರದೇಶಗಳೇ ಆಗಿದ್ದವು... 

ಭೌಗೋಳಿಕವಾಗಿ ನಮ್ಮದೇ ಕನ್ನಡ ಭಾಷೆ ಮಾತಾಡುವ ಏಕೀಕೃತ ಕರ್ನಾಟಕ ರಾಜ್ಯ ನಮಗೆ ದೊರಕಿದರೂ ನಮ್ಮ ಭಾಷೆಯ ವಿಷಯದಲ್ಲಿ ನಮ್ಮಲ್ಲಿನ ಗೊಂದಲಗಳು, ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ... ಆಡಳಿತ ಭಾಷೆಯಾಗಿ ಮತ್ತು ಶಿಕ್ಷಣ ಮಾಧ್ಯಮವಾಗಿ ನಾವು ಕನ್ನಡವನ್ನು ಬಳಕೆಗೆ ತರಲು ಅಷ್ಟಾಗಿ ಯಶಸ್ವಿಯಾಗಿಲ್ಲ.. 

ಅದರಲ್ಲೂ ಮಾತೃಭಾಷೆ ಅಂದರೆ ತಾಯಿನುಡಿಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವುದಕ್ಕೆ ಕಳೆದ ಮೂರು ದಶಕಗಳಿಂದಲೂ ತೊಡಕುಗಳೇ ನಮಗೆದುರಾಗಿದೆ. ತಾಯಿನುಡಿ ಕನ್ನಡದಲ್ಲಿ  ಪ್ರಾಥಮಿಕ ಶಿಕ್ಷಣ ನೀಡುವುದಕ್ಕೆ ಹೆಚ್ಚಿನ ಬಾರಿ ತೊಡರುಗಾಲಾದದ್ದು ನ್ಯಾಯಾಂಗವೇ ಆದರೂ ರಾಜ್ಯವನ್ನು ಆಳಿದ ರಾಜಕಾರಣಿಗಳಲ್ಲಿನ ಇಚ್ಛಾಶಕ್ತಿಯ ಕೊರತೆಯೂ, ಒಳರಾಜಕೀಯ ಪಟ್ಟುಗಳೂ ಕಾರಣವಾಗಿತ್ತು. ಪ್ರಾಥಮಿಕ ಶಿಕ್ಷಣದಲ್ಲಿ ಒಂದರಿಂದ ನಾಲ್ಕನೆಯ ತರಗತಿಯವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕೆಂದು ೧೯೮೨ರಲ್ಲಿ ಗುಂಡೂರಾಯರ ಸರಕಾರ ಮೊದಲ ಬಾರಿಗೆ ಕಾನೂನು ಜಾರಿಗೆ ತಂದಿತು... ಇದರ ಹಿಂದೆ ಗೋಕಾಕ್ ವರದಿ ಮತ್ತು ಅದಕ್ಕೆ ಸಂಬಂಧಿಸಿದ ಚಳವಳಿಯ ಹಿನ್ನೆಲೆಯಿತ್ತು. ಆದರೆ ಈ ಆಜ್ಞೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಇಲ್ಲಿಂದಲೇ ಪ್ರಾಥಮಿಕ ಶಿಕ್ಷಣ ಕನ್ನಡ ಭಾಷೆಯಲ್ಲಿಯೇ  ಇರಬೇಕೆಂಬ ವಿಷಯದ ಬಗ್ಗೆ ಕಾನೂನು ಹೋರಾಟ ಶುರು ಆದದ್ದು... 

ಮೊದಲ ಹೋರಾಟದಲ್ಲಿ ಕನ್ನಡಕ್ಕೆ ಸೋಲಾಯಿತು... ಉಚ್ಚ ನ್ಯಾಯಾಲಯ ರಾಜ್ಯದ ಭಾಷಾ ಅಲ್ಪಸಂಖ್ಯಾತರ ನಿಂತು ಸರಕಾರದ ಆಜ್ಞೆಯನ್ನು ರದ್ದು ಮಾಡಿತು. ಕರ್ನಾಟಕ ಸರಕಾರ ೧೯೮೯ ರಲ್ಲಿ ರಾಜ್ಯ ಸರಕಾರ ಕೋರ್ಟು ತೀರ್ಪಿಗೆ ಅನುಗುಣವಾಗಿ ಅಲ್ಪಸಂಖ್ಯಾತ ಭಾಷೆಗಳಿಗೂ ಅವಕಾಶ ನೀಡಿ ಇನ್ನೊಂದು ಆದೇಶ ಹೊರಡಿಸಿ ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಆಗಬೇಕೆಂದು ಕಾನೂನು ಮಾಡಿತು. 

ಕನ್ನಡ ಭಾಷಾ  ವಿರೋಧಿಸಿ ಖಾಸಗೀ ಶಾಲೆಯ ಮಂದಿ ಮತ್ತೆ ನ್ಯಾಯಾಲಯಕ್ಕೆ ಹೋದರು.  ಸರ್ವೋಚ್ಛ ನ್ಯಾಯಾಲಯ ೧೯೯೩ರಲ್ಲಿ   ರಾಜ್ಯ ಸರಕಾರದ ೮೯ರ ಆದೇಶವನ್ನು ಎತ್ತಿ ಹಿಡಿಯಿತು... ೯೪ರಲ್ಲಿ ರಾಜ್ಯ ಸರಕಾರ ಮತ್ತೆ ಒಂದು ಹೊಸಾ ಆದೇಶ ಹೊರಡಿಸಿ ಒಂದರಿಂದ ನಾಲ್ಕನೆಯ ತರಗತಿಯವರೆಗೆ ಮಾತೃಭಾಷಾ ಅಥವಾ ರಾಜ್ಯಭಾಷಾ ಮಾಧ್ಯಮದ ಕಲಿಕೆ ಕಡ್ಡಾಯ ಮಾಡಿತು. 

ಆದರೂ ಮತ್ತೆ ಈ ಕೇಸು ಸರ್ವೋಚ್ಛ ನ್ಯಾಯಾಲಯದ   ಅಂಗಳಕ್ಕೆ ಹೋಯಿತು. ಸರ್ವೋಚ್ಛ ನ್ಯಾಯಾಲಯ ಕೇಸನ್ನು ವಜಾಗೊಳಿಸಿತು. ಸರಕಾರಕ್ಕೆ ಜಯವಾಯಿತು... ಇಲ್ಲಿಗೂ ಖಾಸಗಿ ಶಾಲೆಗಳ ವಿರೋಧ ನಿಲ್ಲಲೇ ಇಲ್ಲ. ೯೪ರ ಸರಕಾರೀ ಆದೇಶದ ವಿರುದ್ಧ ಮತ್ತೆ ಖಾಸಗೀ ಶಾಲೆಗಳ ಒಕ್ಕೂಟ ನ್ಯಾಯಾಲಯಕ್ಕೆ ಹೋದವು.  ೨೦೦೮ ರಲ್ಲಿ ಈ   ತೀರ್ಪು ನೀಡಿದ ರಾಜ್ಯದ ಉಚ್ಚ ನ್ಯಾಯಾಲಯವು ‘ಮಾತೃಭಾಷಾ ಮಾಧ್ಯಮವನ್ನು ಸರ್ಕಾರಿ ಮತ್ತು ಸರ್ಕಾರದ ಅನುದಾನಿತ ಶಾಲೆಗಳಿಗೆ ಮಾತ್ರ ಕಡ್ಡಾಯ ಮಾಡಬಹುದು. ಅನುದಾನ ರಹಿತ ಖಾಸಗಿ ಶಾಲೆಗಳಿಗೆ  ಕಡ್ಡಾಯ ಮಾಡುವಂತಿಲ್ಲ’ ಎಂದು ಹೇಳಿತು. 

ಈ ೨೦೦೮ರ ತೀರ್ಪು ೧೯೯೪ರ ಆದೇಶಕ್ಕೆ ವಿರುದ್ಧವಾಗಿದ್ದುದರಿಂದ ರಾಜ್ಯ ಸರಕಾರ ಈ ತೀರ್ಪಿಗೆ ವಿರುದ್ಧ   ಸರ್ವೋಚ್ಛ ನ್ಯಾಯಾಲಯಕ್ಕೆ   ಮೇಲ್ಮನವಿ  ಸಲ್ಲಿಸಿತು. ಆದರೆ ಸಂಕಷ್ಟ ನಿಜವಾಗಿಯೂ  ಶುರುವಾದದ್ದು ೨೦೧೪ ರಲ್ಲಿ  ಸರ್ವೋಚ್ಛ ನ್ಯಾಯಾಲಯ  ರಾಜ್ಯದ ಮೇಲ್ಮನವಿಯನ್ನು ವಜಾಗೊಳಿಸಿ ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದ್ದರಿಂದ..! ಆದರೂ ಇದನ್ನು ಪ್ರಶ್ನಿಸಿ ರಾಜ್ಯ ಸರಕಾರ ಮತ್ತೆ ಇನ್ನೊಂದು ಕ್ಯೂರೇಟಿವ್ ಪಿಟಿಷನ್ ಸಲ್ಲಿಸಿತಾದರೂ ಅದನ್ನೂ ಸರ್ವೋಚ್ಛ ನ್ಯಾಯಾಲಯ ವಜಾಗೊಳಿಸಿದ್ದರಿಂದ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡಬೇಕೆಂಬ ಎಲ್ಲ ಪ್ರಯತ್ನಗಳೂ ಕೊನೆಯಾಗಿ ಎಲ್ಲಾ ದಾರಿಗಳೂ ಶಾಶ್ವತವಾಗಿ ಮುಚ್ಚಿ ಹೋದವು... 

ನಮ್ಮ ರಾಜ್ಯದಲ್ಲಿ ನಮ್ಮ ರಾಜ್ಯದ ಭಾಷೆಯಾದ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು ಅಂತ ಸುಮಾರು ಮೂರು ದಶಕಗಳ ಈ ಸುಧೀರ್ಘ ಹೋರಾಟಕ್ಕೆ ಜಯವೇ ಸಿಗಲಿಲ್ಲ ಅನ್ನುವುದು ಅದೆಷ್ಟು ದೊಡ್ಡ ದುರಂತವೋ ಅದಕ್ಕಿಂತ ದೊಡ್ಡ ದುರಂತವೆಂದರೆ ಇದಕ್ಕೆ ತೊಡರುಗಾಲು ಹಾಕಿದ್ದು ನಮ್ಮದೇ ಜನ, ನಮ್ಮದೇ ರಾಜ್ಯದಲ್ಲಿ ಖಾಸಗೀ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಕನ್ನಡಿಗರೇ...! 

ಆದರೆ ಇದೆಲ್ಲಕ್ಕಿಂತ ಅತೀ ದೊಡ್ಡ ದುರಂತಗಳು ಸದ್ದೇ ಇಲ್ಲದೆ ನಡೆದುಹೋಗಿದೆ... ಕನ್ನಡ ಭಾಷೆಯ ವಿಷಯವನ್ನು ಆಗಾಗ ರಾಜಕೀಯಗೊಳಿಸುತ್ತಾ ಅದರಿಂದ ಲಾಭ ಪಡೆಯುವ ಕೆಲ ರಾಜಕಾರಣಿಗಳಿಂದ ಕನ್ನಡ ಭಾಷಾ ಮಾಧ್ಯಮದ ಶಿಕ್ಷಣ ಎಂಬ ಮೂಲ ಪರಿಕಲ್ಪನೆಗೆ ಅತೀ ದೊಡ್ಡ ದ್ರೋಹವಾಗಿದೆ... 

ತನ್ನ ರಾಜಕೀಯ ಜೀವನವನ್ನೇ ಕನ್ನಡ ಕಾವಲು ಸಮಿತಿಯ ಮೊಟ್ಟಮೊದಲ ಅಧ್ಯಕ್ಷರಾಗಿ ಶುರು ಮಾಡಿದ ಸಿದ್ದರಾಮಯ್ಯ ತಾವು ಅಧಿಕಾರದಲ್ಲಿದ್ದಾಗ ಮಾತು ಮಾತಿಗೆ ಕನ್ನಡದ ಬಗ್ಗೆ, ಕನ್ನಡ ಭಾಷಾ ಶಿಕ್ಷಣದ ಬಗ್ಗೆ ಸಿಕ್ಕಾಪಟ್ಟೆ ಮಾತಾಡೋರು. ಮುಖ್ಯ ಮಂತ್ರಿಯಾದಾಗಲೂ ಮಾತೃಭಾಷೆ ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ನೀಡಬೇಕು ಅಂತಲೂ ಪ್ರತಿಪಾದಿಸೋರು... ಬಳಿಕ ಮುಖ್ಯಮಂತ್ರಿ ಖುರ್ಚಿಯಿಂದ ಇಳಿದ ಮೇಲೂ ಈಗಲೂ ಅದೇ ಮಾತುಗಳನ್ನೇ ಆಡುತ್ತಾರೆ... 

ಕುಮಾರಸ್ವಾಮಿಯವರೂ ತಮ್ಮದು ಪ್ರಾದೇಶಿಕ  ಪಕ್ಷ, ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವ, ಕನ್ನಡ ಭಾಷೆಯ ಉದ್ಧಾರವನ್ನು ಮಾಡುವ ಪಕ್ಷ ಅಂತೆಲ್ಲಾ ಸಮಯ ಸಿಕ್ಕಿದಾಗಲೆಲ್ಲ ಹೇಳುತ್ತಾರೆ. ಅವರೂ ಕೂಡಾ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವೇ ಬೇಕು ಅಂತೆಲ್ಲ ಒಂದು ಕಾಲಕ್ಕೆ ಪ್ರತಿಪಾದಿಸಿದವರೇ... 

ಅದಕ್ಕೆ ಸರಿಯಾಗಿ  ನಮ್ಮ ಅನೇಕಾನೇಕ ಕನ್ನಡ ಸಂಘಟನೆಗಳೂ ಕೂಡಾ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪರ ನೇರವಾಗಿ ಬೀದಿಗಿಳಿದಿದ್ದವು.

ಜೊತೆಗೆ,ಅದೇ ವೇಳೆ ಮೋದೀಜಿ ಪ್ರಧಾನಿಯಾದ ನಂತರ ಇವರೆಲ್ಲ ಕೇಂದ್ರ ಸರಕಾರದ ತಥಾಕಥಿತ ಹಿಂದೀ ಹೇರಿಕೆಯ ವಿರುದ್ಧ ತೋಳು ತಟ್ಟಿ ಕೇಂದ್ರ ಸರಕಾರ ಮತ್ತು ಮೋದೀಜಿಯವರ ವಿರುದ್ಧವೂ ... ಬಹಿರಂಗವಾಗಿ ಧಿಕ್ಕಾರ ಕೂಗಲಾರಂಭಿಸಿದ್ದವು.ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತ ಸಮುದಾಯಗಳಿಗಾಗಿ 'ಮೌಲಾನಾ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ" ಗಳನ್ನು  ಆರಂಭಿಸಲು ೨೦೧೭ನೇ ಸಾಲಿನ ಬಜೆಟ್ ಅನುಮೋದನೆ ನೀಡಿದರು. ಬಳಿಕ ಬಂದ ಕುಮಾರಸ್ವಾಮಿಯವರು ೨೦೧೮ರಲ್ಲಿ  ಒಂದು ಸಾವಿರ ಸರಕಾರೀ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿದರು. 

ಸರಕಾರವೇ ಮುಂದೆ ನಿಂತು ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿದಾಗ ಅದುವರೆಗೂ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವೇ ಬೇಕು ಅಂತ ಆಕಾಶ ಭೂಮಿ ಒಂದು ಮಾಡುತ್ತಿದ್ದ ಕನ್ನಡ ಹೋರಾಟಗಾರರೆಲ್ಲಾ ನಾಪತ್ತೆಯಾಗಿದ್ದರು... 

ಸರ್ವೋಚ್ಚ ನ್ಯಾಯಾಲಯದ ಬಾಗಿಲು ಶಾಶ್ವತವಾಗಿ ಮುಚ್ಚಿ ಹೋಗಿ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಬೇಕೆಂಬ ಆಜ್ಞೆ ಹೊರಡಿಸಲು ರಾಜ್ಯ ಸರಕಾರಕ್ಕೆ ಯಾವುದೇ ಹಕ್ಕಿಲ್ಲವೆಂದಾಗ ರಾಜ್ಯ ಸರಕಾರವೇ ಮುಂದೆ ನಿಂತು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಯಿತು.  ಆದರೆ ತಾನಿದ್ದಾಗ 'ಮೌಲಾನಾ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ" ತೆರೆಯಲು ಅನುದಾನ ಒದಗಿಸಿದ್ದ ಸಿದ್ದರಾಮಯ್ಯನವರು ಕುಮಾರಸ್ವಾಮಿ ಸರಕಾರೀ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಹೊರಟಾಗ ವಿರೋಧ ಮಾಡತೊಡಗಿದ್ದರು..! ಜೊತೆಗೆ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಬೇಕು, ಅದಕ್ಕೆ ಕೇಂದ್ರದ ಮೋದೀಜಿಯವರ ಸರಕಾರ ಸಂವಿಧಾನವನ್ನೇ ತಿದ್ದುಪಡಿ ಮಾಡಬೇಕೆಂದು ಕರೆಕೊಟ್ಟರು..! 

ಈಗ ಅಂಥಾ ಸಂವಿಧಾನ ತಿದ್ದುಪಡಿಯ ಅಗತ್ಯವೇ ಇಲ್ಲದೆ ಕೇಂದ್ರ ಸರಕಾರ ತಂದಿರುವ ನೂತನ ಶಿಕ್ಷಣ ನೀತಿ ಪ್ರಾಥಮಿಕ ಶಿಕ್ಷಣ ತಾಯಿನುಡಿಯಲ್ಲಿಯೇ ಆಗಬೇಕೆಂದು ಹೇಳಿದೆ... ಸರ್ವೋಚ್ಚ ನ್ಯಾಯಾಲಯದಲ್ಲಿ ಕಡ್ಡಾಯ ಕನ್ನಡ ಮಾಧ್ಯಮ ಶಿಕ್ಷಣ ಜಾರಿ ಮಾಡುವ ಅವಕಾಶ ಕಳೆದುಕೊಂಡಿದ್ದ ರಾಜ್ಯ ಸರ್ಕಾರಕ್ಕೆ ಇದೀಗ ಮೋದೀಜಿಯವರ ನೂತನ ಶಿಕ್ಷಣ ನೀತಿ ಹೊಸ ಅವಕಾಶವನ್ನು ನೀಡಿದೆ. 

ತಾಯಿನುಡಿಯಲ್ಲೇ ಪ್ರಾಥಮಿಕ ಶಿಕ್ಷಣದ ಅವಕಾಶ ಸುಲಭವಾಗಿ ಒದಗಿರುವ ಸಂತಸದ ಜೊತೆಗೆ ಇನ್ನೊಂದು ಸಂಸತಸವೂ ಈ ಬಾರಿಯ ರಾಜ್ಯೋತ್ಸವದ ಸಂದರ್ಭದಲ್ಲಿ  ಒದಗಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಲತಾಣಗಳ ಹೆಸರು, ಅಂದರೆ ವೆಬ್ ವಿಳಾಸ ಮತ್ತು ಡೊಮೇನ್ ಹೆಸರು ಇದುವರೆಗೆ ಆಂಗ್ಲ ಭಾಷೆಯಲ್ಲೇ ಇರಬೇಕಿತ್ತು. ಜಾಲತಾಣ ಕನ್ನಡದ್ದೇ ಆದರೂ ಜಾಲತಾಣದ ವಿಳಾಸ ಮಾತ್ರ ಆಂಗ್ಲ ಲಿಪಿಯಲ್ಲೇ ಇರಬೇಕಿತ್ತು ಆದರೆ ಹಲವಾರು ತಂತ್ರಜ್ಞರ ಪರಿಶ್ರಮದಿಂದ ಇದೀಗ ಜಾಲತಾಣಗಳ ವಿಳಾಸ ಕೂಡಾ ಕನ್ನಡ ಲಿಪಿಯಲ್ಲೇ ಬರೆದು .ಭಾರತ್ ಎಂಬ ಡೊಮೇನ್ ಹೆಸರನ್ನೂ ಕನ್ನಡ ಲಿಪಿಯಲ್ಲೇ ಬರೆಯಬಹುದು... 

ಹಾಗಾಗಿ ಅನಂತಕುಮಾರಹೆಗಡೆ.ಭಾರತ ಎಂಬ ಕನ್ನಡ ಲಿಪಿಯ ಜಾಲತಾಣ ವಿಳಾಸವೂ ಇನ್ನುಮುಂದೆ ಲಭ್ಯ ... 

ಈ ಬಾರಿಯ ಕನ್ನಡ ರಾಜ್ಯೋತ್ಸವ ಸಧ್ಯದ ಕೊರೋನಾ ಖಾಯಿಲೆಯ ಪರಿಸ್ಥಿತಿಯಿಂದ ಕೊಂಚ ಕಳೆಗುಂದಿದರೂ 

ಈ ಎಲ್ಲ ವಿಷಯಗಳಿಂದ ಹೊಸ ಮೆರುಗು ಪಡೆದುಕೊಂಡಿದೆ. ಜಗತ್ತಿನಲ್ಲಿರುವ ಎಲ್ಲಾ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ, ಕನ್ನಡ ನಾಡುನುಡಿಯ ಹೆಮ್ಮೆಯ ಹಬ್ಬದ ಶುಭಾಶಯಗಳು... 

ಜೈ ಕನ್ನಡಾಂಬೆ.... ಜೈ ಕರ್ನಾಟಕ ....

 

Related posts