Infinite Thoughts

Thoughts beyond imagination

ಕನಕದಾಸರ ಜಯಂತಿಯ ಹಾರ್ಧಿಕ ಶುಭಾಶಯಗಳು

ಆಧ್ಯಾತ್ಮ ಚಿಂತನೆಯ ಶಿಖರವನ್ನೇರಿ ನಿಂತ ಅಪ್ಪಟ ಚಿನ್ನದಂತ...  ಕನಕನೆಂಬ ಕಾಲಾತೀತ ಸಂತ...

ಇವತ್ತು ಕರುನಾಡ ದಾಸವರೇಣ್ಯ ಶ್ರೇಷ್ಠ ದಾರ್ಶನಿಕ ಕನಕದಾಸರ ಜಯಂತಿ. ಕತ್ತಿ ಗುರಾಣಿ ಹಿಡಿದು ರಣಾಂಗಣದಲ್ಲಿ ಹೋರಾಡಿದ ಡಣ್ಣಾಯಕ ಶಸ್ತ್ರತ್ಯಜಿಸಿ ಕೈಯಲ್ಲಿ ತಂಬೂರಿ ಹಿಡಿದು ಕೀರ್ತನಕಾರನಾಗಿ, ಲೇಖನಿ ಹಿಡಿದು ಕವಿಯಾಗಿ, ಅಧ್ಯಾತ್ಮ ತತ್ವ ಹೇಳಿದ ದಾರ್ಶನಿಕನಾಗಿ ಬದಲಾದ ಸೋಜಿಗವೇ ಕನಕದಾಸರೆಂಬ ದಾಸವರೇಣ್ಯನ ಜೀವನ ವೃತ್ತಾಂತ. 

ಕನಕ ದಾಸರ ಲೋಕದೃಷ್ಟಿಯ ವಿಸ್ತಾರ ಬಹಳ ದೊಡ್ಡದು. ಕನಕದಾಸರು ತಮ್ಮ ವಿಡಂಬನಾತ್ಮಕ ವೈಚಾರಿಕ ಚಿಂತನೆಯಿಂದಾಗಿ ಇತರ ಸಮಕಾಲೀನ ಭಕ್ತಿಪಂಥದ ಕೀರ್ತನಕಾರರಿಂದ ವಿಶಿಷ್ಟವಾಗುಳಿಯುತ್ತಾರೆ. ಜನಸಾಮಾನ್ಯರ ಸಾಮಾಜಿಕ ಬದುಕಿನ ನೋಟದೊಳಗೆಯೇ ಘನವಾದ ಅಧ್ಯಾತ್ಮ ತತ್ವಗಳ ಕಾಣ್ಕೆಯೊಂದನ್ನು ಸೃಷ್ಟಿಸುವ, ಅದರೊಳಗೆ ದಾರ್ಶನಿಕತೆ ತುಂಬುವ ಕನಕದಾಸರ ಶೈಲಿ ಅದ್ಭುತ. ತನ್ನನ್ನು ತಾನೇ 'ಕುರುಬ' ಅಂತ ಕರೆದುಕೊಳ್ಳುತ್ತಾ, ತಾವು ಕಾಯುವ ಕುರಿಮಂದೆಯೊಳಗೆಯೇ ತಾತ್ವಿಕ ಉಪಮೆಗಳನ್ನು ಸೃಷ್ಟಿಸಿ ಆಧ್ಯಾತ್ಮಿಕತೆಯ ಆಳ ನೋಟವನ್ನೊದಗಿಸುವ ಕನಕದಾಸರ ಕಲ್ಪನಾಶಕ್ತಿ ಅಸದೃಶವಾದುದು. ಕುರಿಗಳ ಹಿಂಡನ್ನು ಮನುಷ್ಯರಿಗೂ, ಎಂಟು ಬಗೆಯ ಮದ-ಮಾತ್ಸರ್ಯಗಳನ್ನು ಟಗರುಗಳಿಗೂ, ವೇದ ಶಾಸ್ತ್ರ ಪುರಾಣಗಳನ್ನು ಕುರಿಗಳನ್ನು ಕಾಯುವ ಶ್ವಾನಗಳಿಗೂ, ಭಗವಂತನನ್ನು ತಮ್ಮ ಅಜ್ಜನಿಗೂ ಹೋಲಿಸಿ ಕುರುಬನ ಕುರಿಮಂದೆಯ ಹಿನ್ನೆಲೆಯಲ್ಲೇ ಅಧ್ಯಾತ್ಮದ ಕತೆ ಹೇಳುವ ಕನಕದಾಸರಿಗೆ ಅವರೇ ಸಾಟಿ..! 

ನಾವು ಕುರುಬರು, ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿಯ ಹಿಂಡುಗಳ ಅಷ್ಟಮದ ಮತ್ಸರಗಳೆಂತೆಂಬ ಟಗರುಗಳು ದೃಷ್ಟಿ ಜೀವಾತ್ಮನೆಂತೆಂಬ..  

ಆಡು ಸೃಷ್ಟಿಸಿದ್ಧ ಪ್ರಸಿದ್ಧವೆಂತೆಂಬ ಹೋತಗಳು ಕಟ್ಟಿ ಕೋಲಿನಲಿ ಇರಿಯುತಿಹ ನಮ್ಮಜ್ಜ 

ವೇದಶಾಸ್ತ್ರ ಪುರಾಣವೆಂತೆಂಬ ಶ್ವಾನಗಳು ಕಾದಿದ್ದು ನಮ್ಮಜ್ಜನ ಹಿಂಡೊಳಗೆ...  ಹಾದಿಗಾಣದೆ ಕೂಗಿ ಬಾಯಾರಿ ಕಾಲ್ಗೆಡಲು ಆದರಿಸಿ ಅಂಬಲಿಯನೆರೆವ ನಮ್ಮಜ್ಜ 

ಅರಿವೆಂಬ ಮರಿಗಳು ಹಿಂಡಿನೊಳಗಡೆ ಬರಲು ಮರೆವೆಂಬ ವ್ಯಾಘ್ರ ಕಿರುಬ ತೋಳಗಳು...  ಹೊಕ್ಕು ತರುಬಿ ಹಿಂಜಾವದಲಿ ಕುರಿಯ ಮುರಿವುದ ಕಂಡು ಅರಿತು ಅರಿಯದ ಹಾಗೆ ಇರುವ ನಮ್ಮಜ್ಜ 

ಹುಟ್ಟುದಕೆ ಮೊದಲಿಲ್ಲ ಸಾವುದಕೆ ಕೊನೆಯಿಲ್ಲ ಹುಟ್ಟು ಸಾವಿನ ಹೊಲಬ ಬಲ್ಲ ನಮ್ಮಜ್ಜ ಅಷ್ಟು ಪ್ರಾಣಿಗಳಿಗೆ ಇಷ್ಟು ಅಂಬಲಿ ಮಾಡಿ ಹೊಟ್ಟೆ ತುಂಬುವ ಹಾಗೆ ಎರೆವ ನಮ್ಮಜ್ಜ 

ಕಲಿಯುಗಕೆ ಗೌಡನಿವ ಸಂಗಾತಿ ಮಂತ್ರಿಸುತ ಕಲಿಯುಗಂಗಳನೆಲ್ಲ ಪೊರೆವಾತನೀತ ಜಲಜಾಕ್ಷ ಕಾಗಿನೆಲೆಯಾದಿ ಕೇಶವನ ಮನವೊಲಿಸಿ ಭಜಿಸದ ಮನುಜ ಹುಚ್ಚು ಕುರುಬ   

ಭಕ್ತಿ ಪಂಥದ ಬಹುಮುಖ್ಯ ಕೀರ್ತನೆಕಾರರಾದರೂ ಕನಕದಾಸರು ಹಲವು ಕಾವ್ಯಗಳನ್ನೂ ರಚಿಸಿದ್ದಾರೆ. ಕನಕದಾಸರ ವಿಡಂಬನಾತ್ಮಕ ದೃಷ್ಟಿಕೋನ ಮತ್ತು ಹಾಸ್ಯ ಪ್ರಜ್ಞೆಯೂ ಅಸದಳವಾದುದೇ... "ರಾಮಧಾನ್ಯ ಚರಿತೆ" ಎಂಬ ಕಾವ್ಯ ಇದಕ್ಕೊಂದು ಉತ್ತಮ ಉದಾಹರಣೆ... ಶ್ರೀರಾಮನು ರಾವಣಾದಿಗಳನ್ನು ಸಂಹರಿಸಿ, ಸೀತಾಮಾತೆಯನ್ನು ಬಂಧಮುಕ್ತಗೊಳಿಸಿ, ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿಸಿ, ತನ್ನ ವಾನರ ಪರಿವಾರದೊಡನೆ ಅಯೋಧ್ಯೆಗೆ ಮರಳಿ ಬರುವ ದಾರಿಯಲ್ಲಿ ಹಲ ಮುನಿವರರ ಆತಿಥ್ಯ ಸ್ವೀಕರಿಸುವ ಕಥೆಯಿದೆ. ಆ ಮುನಿಶ್ರೇಷ್ಠರೆಲ್ಲಾ ರಾಮ ಮತ್ತವನ ಪರಿವಾರಕ್ಕೆ ವಿವಿಧ ಭಕ್ಷ್ಯಭೋಜ್ಯಗಳನ್ನು ಉಣಬಡಿಸಿದರು... 

ಅಲ್ಲಿ ನೆರೆದ ಮಹಾಮುನೀಶ್ವರರೆಲ್ಲ ತರಿಸಿದರಖಿಳ ವಸ್ತುವ ಬೆಲ್ಲ ಸಕ್ಕರೆ ಜೇನುತುಪ್ಪ ರಸಾಯನಂಗಳಲಿ ಭೊಲ್ಲವಿಸಿ ರಚಿಸಿದ ಸುಭಕ್ಷಗಳೆಲ್ಲವನು ತುಂಬಿದರು ಹೆಡಗೆಗ ಳಲಿ ಜೋಡಿಸಿ ಹೊರಿಸಿ ತಂದರು ರಾಮನೋಲಗಕೆ 

ಅಂತ ವಿವರಿಸುವ ಕನಕದಾಸರು ಬಳಿಕ ರಾಮನ ಪರಿವಾರ ಆ ಭಕ್ಷ್ಯ ಭೋಜ್ಯಗಳನ್ನೆಲ್ಲಾ ಸಂತಸದಿಂದ  ಸ್ವೀಕರಿಸಿದ ನಂತರ ಶ್ರೀರಾಮ ತನ್ನ ಭಂಟ ಹನುಮನನ್ನು ಕರೆದು ಭೋಜನದ ರುಚಿಯ ಬಗ್ಗೆ ಪ್ರಶ್ನಿಸಿದ ಕುರಿತು ಹೇಳುತ್ತಾರೆ.... ಇಲ್ಲಿಂದಲೇ "ರಾಮಧಾನ್ಯ ಚರಿತ್ರೆ' ಎಂಬ ಕಾವ್ಯದ ಅಸಲೀ ಕತೆ ಶುರುವಾಗುವುದು... ಆಗ ಹನುಮಂತ ಆಹಾರ ತಯಾರಿಸಲು ಬಳಸಿದ ಎಲ್ಲಾ ಧಾನ್ಯಗಳನ್ನೂ ತಾನೊಮ್ಮೆ ಪರಿಶೀಲಿಸಬೇಕು ಅಂತ ಬೇಡಿಕೆಯಿಡುತ್ತಾನೆ... ಆಗ "ನರೆದಲೆಗ(ರಾಗಿ) ನೆಲ್ಲು(ಭತ್ತ) ಹಾರಕ, ಬರಗು, ಜೋಳ, ಕಂಬು, ಸಾಮೆ, ನವಣೆ, ಮೊದಲಾದ ನವಧಾನ್ಯಗಳನ್ನು ಮುನಿಗಳು ತಂದಿಡುತ್ತಾರೆ... 

ಆಗ ಅಲ್ಲಿ ಸಿರಿವಂತರ ಆಹಾರವೆಂದೇ ಪರಿಗಣಿಸಲ್ಪಟ್ಟ ನೆಲ್ಲು(ಭತ್ತ)  ಮತ್ತು ಬಡವರ ಆಹಾರವೆಂದೇ ಪರಿಗಣಿಸಲಾದ ನರೆದಲೆಗ(ರಾಗಿ) ಯ ಮಧ್ಯೆ ಶ್ರೇಷ್ಠತೆಯ  ಪೈಪೋಟಿ ಪ್ರಾರಂಭವಾಗುತ್ತದೆ...! ಅಕ್ಕಿ ಮತ್ತು ರಾಗಿಯ ಮಧ್ಯೆಯ ಜಗಳವೇ "ರಾಮಧಾನ್ಯ ಚರಿತೆ" ಯ ಮುಖ್ಯ ಕಥಾಭಾಗ...! 

ಇಲ್ಲಿ ಕನಕದಾಸರು ಶ್ರೀಮಂತ ಮತ್ತು ಬಡವರ ಆಹಾರದ ಮಧ್ಯೆ ಇರುವ ಅಸಮಾನತೆ, ಮೇಲು-ಕೀಳು ವರ್ಗೀಕರಣದ ಬಗ್ಗೆ ವಿಡಂಬನಾತ್ಮಕವಾಗಿ ಕಾವ್ಯ ರಚಿಸಿದ್ದಾರೆ... ಅಕ್ಕಿಯು ತಾನು ಶ್ರೇಷ್ಠವೆಂದು ಹೇಳಿಕೊಳ್ಳುತ್ತಾ ರಾಗಿಯನ್ನು ಹೀನವೆಂದು ತೆಗಳುವ ಚಿತ್ರಣ ಇಲ್ಲಿದೆ. ಬಳಿಕ ರಾಗಿಯು "ಮಳೆಯಿಲ್ಲದೆ ಬರಗಾಲ ಬಂದಾಗ, ನೀರೇ ಇಲ್ಲದೆ ಭತ್ತವನ್ನು ಬೆಳೆಯಲಾಗದ ಪರಿಸ್ಥಿತಿಯಲ್ಲಿ ತಾನು ಬಡವ ಬಲ್ಲಿದ ಎಂಬ ಬೇಧ ಎಣಿಸದೆಯೇ ಎಲ್ಲರ ಹೊಟ್ಟೆಯನ್ನೂ ಹೊರೆಯುತ್ತೇನೆ" ಅನ್ನೋ ರೀತಿಯ ವಿವರಣೆ ನೀಡಿ ಅಕ್ಕಿಗಿಂತ ತಾನು ಹೇಗೆ ಶ್ರೇಷ್ಠ ಅಂತ ವಿನಮ್ರವಾಗಿ ವಿವರಿಸುತ್ತದೆ. ಕೊನೆಗೆ ಅಕ್ಕಿ ಮತ್ತು ರಾಗಿಯ ವಾದವನ್ನು ಆಲಿಸಿದ ರಾಮ ಇದು ಸುಲಭದಲ್ಲಿ ಬಗೆಹರಿಯದ ವಿವಾದ ಎಂದೆಣಿಸಿ ತಾನು ಅಯೋಧ್ಯೆಗೆ ತಲುಪಿದ ಮೇಲೆಯೇ ಇದರ ಬಗ್ಗೆ ತೀರ್ಮಾನಿಸುವುದಾಗಿ ತಿಳಿಸುತ್ತಾನೆ..! ಬಳಿಕ ಅಯೋಧ್ಯೆಯಲ್ಲಿ  ಪಟ್ಟಾಭಿಷಿಕ್ತನಾದ ಬಳಿಕ ಶ್ರೀರಾಮನು ಆಸ್ಥಾನಕ್ಕೆ ನೆಲ್ಲು(ಭತ್ತ)  ಮತ್ತು ನರೆದಲೆಗ(ರಾಗಿ) ಯನ್ನು ಕರೆಸಿ ತನ್ನ ಆಸ್ಥಾನದಲ್ಲಿದ್ದ ಮಹಾನ್  ತಪೋ ಮಹಿಮರಾಗಿದ್ದ ಋಷಿ ಮುನಿಗಳೆಲ್ಲರ ಅಭಿಪ್ರಾಯ ಕೇಳಿ, ಕೊನೆಗೆ ನರೆದಲೆಗವೇ ಶ್ರೇಷ್ಠ ಎಂದು ತೀರ್ಮಾನಿಸಿದ...! ತನ್ನ ಹೆಸರಾದ "ರಾಘವ" ಎಂಬ ನಾಮಧೇಯಯವನ್ನು ನರೆದಲೆಗಕ್ಕೆ ನೀಡಿದ... ಅಲ್ಲಿಂದ ಮುಂದೆ ನರೆದಲೆಗ  ರಾಘವ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು  "ರಾಗಿ" ಎಂದೇ ಖ್ಯಾತವಾಯಿತು...! 

ಬಹಳ ಘನವಾದ ವೈಚಾರಿಕತೆಯನ್ನು, ತಾತ್ವಿಕತೆಯನ್ನು, ದಾರ್ಶನಿಕತೆಯನ್ನು ತನ್ನ ಕೃತಿಗಳಲ್ಲಿ ಹೇಳಿದ ಕನಕದಾಸರು ಅತ್ಯಂತ ತಮಾಷೆಯ ರೀತಿಯಲ್ಲಿ ವಿಡಂಬನಾತ್ಮಕವಾಗಿಯೂ ಸಾಮಾಜಿಕ ಅಂತರದ ಮೇಲುಕೀಳಿನ ಕತೆಯನ್ನು ಅಕ್ಕಿ ಮತ್ತು ರಾಗಿಯ ಉಪಮೆಗಳನ್ನು ಬಳಸಿ "ರಾಮಧಾನ್ಯ ಚರಿತೆ" ಕಾವ್ಯದಲ್ಲಿ ಹೀಗೆ ಅಭಿವ್ಯಕ್ತಿಸುತ್ತಾರೆ... 

ಹೀಗೆ ಕನಕದಾಸರು ದಾಸಪರಂಪರೆಯಲ್ಲಿಯೇ ಅತ್ಯಂತ ವಿಶಿಷ್ಟರಾಗಿ ನೆಲೆಕಂಡುಕೊಳ್ಳುತ್ತಾರೆ... ಇವತ್ತು ಅವರ ಜನ್ಮ ಜಯಂತಿ... ಈ ಸಂದರ್ಭದಲ್ಲಿ ದಾಸಶ್ರೇಷ್ಠ ಕನಕರಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇನೆ...

Related posts