Infinite Thoughts

Thoughts beyond imagination

ರಾಷ್ಟ್ರೀಯ ಗಣಿತವಿಜ್ಞಾನ ದಿನ

ಇಂದು ರಾಷ್ಟ್ರೀಯ ಗಣಿತವಿಜ್ಞಾನ ದಿನ 

ಭಾರತೀಯ ಗಣಿತದ ಗತವೈಭವ ಮರುಕಳಿಸಬೇಕಿದೆ.

ಜಗತ್ತಿಗೆ ಲೆಕ್ಕ ಮಾಡಲು ಕಲಿಸಿದ್ದೇ ಭಾರತೀಯರು ಎಂಬುದನ್ನು ಸಾರಿ ಹೇಳಬೇಕಿದೆ... 

ಗಣಿತಪ್ರಪಂಚದ ವಿಸ್ಮಯ, ಗಣಿತಶಾಸ್ತ್ರದ ದಂತಕತೆ, ಗಣಿತವಿಜ್ಞಾನಿ ಶ್ರೀನಿವಾಸ ರಾಮಾನುಜನ್ ಅವರ ಜನುಮದಿನವನ್ನು ಅಂದರೆ ಡಿಸೆಂಬರ್ ೨೨ನೇ ತಾರೀಕನ್ನು  'ರಾಷ್ಟ್ರೀಯ ಗಣಿತವಿಜ್ಞಾನ ದಿನ' ಎಂದು ಆಚರಿಸುತ್ತಿದೇವೆ.  ಗಣಿತವಿಜ್ಞಾನ ಎಂಬ ಜ್ಞಾಶಾಖೆಗೆ ಭಾರತೀಯರ ಕೊಡುಗೆ ಅಗಣಿತವಾದುದು. ತಮಾಷೆಯಾಗಿ ಹೇಳುವಾಗ "ಗಣಿತಕ್ಕೆ ಭಾರತೀಯರ ಕೊಡುಗೆ ಸೊನ್ನೆ" ಅಂತ ಹೇಳುತ್ತೇವೆ...! ಯಾಕೆಂದರೆ ಸೊನ್ನೆ ಎಂಬ ಅಂಕೆಯನ್ನೂ, ದಶಮಾಂಶ ಪದ್ಧತಿಯಲ್ಲಿ ಲೆಕ್ಕ ಹಾಕುವ ಸಂಖ್ಯಾಪದ್ಧತಿಯನ್ನೂ ಕಂಡು ಹಿಡಿದು ಜಗತ್ತಿಗೆ ಪರಿಚಯಿಸಿದ್ದೇ ಭಾರತ...ಅದಕ್ಕೂ ಮೊದಲು ಗ್ರೀಕರು, ರೋಮನ್ನರೆಲ್ಲಾ ಅಂಕೆಗಳ ಜಾಗದಲ್ಲಿ ಅಕ್ಷರಗಳನ್ನು ಉಪಯೋಗಿಸುತ್ತಿದ್ದರು. 

ಇವತ್ತಿನ ಎಲ್ಲ ಆಧುನಿಕ ಸಂಶೋಧನೆಗಳಿಗೆ ಗಣಿತವೇ ಮೂಲ. ಆದರೆ ಜಗತ್ತಿಗೆ ದಶಮಾಂಶ ಪದ್ಧತಿಯನ್ನು ಭಾರತೀಯರು ಪರಿಚಯಿಸದೆ ಹೋಗಿರುತ್ತಿದ್ದರೆ ಇದೆಲ್ಲವೂ ಸಾಧ್ಯವಾಗುತ್ತಿರಲೇ ಇಲ್ಲ... ಆದರೆ ಅದೆಂಥಾ ದೌರ್ಭಾಗ್ಯ ನೋಡಿ... ಸೊನ್ನೆ ಅಥವಾ ಶೂನ್ಯ ಎಂಬ ಅಂಕೆಯ ಮತ್ತು ದಶಮಾಂಶ ಪದ್ಧತಿಯ ಆವಿಷ್ಕಾರ ಮಾಡಿದ್ದು ಹಿಂದೂ ಗಣಿತವಿಜ್ಞಾನಿಗಳೆಂಬ ಸತ್ಯ ಇವತ್ತು ಇಡೀ ಜಗತ್ತಿಗೆ ತಿಳಿದಿದ್ದರೂ ಇವತ್ತಿಗೂ ಈ ಅಂಕೆಗಳನ್ನು "ಅರಾಬಿಕ್ ಅಂಕೆ" ಅಂತಲೇ ಕರೆಯಲಾಗುತ್ತದೆ.  ಯಾಕೆಂದರೆ ಯೂರೋಪಿಗೆ ಈ ಪದ್ಧತಿಯನ್ನು ಪರಿಚಯಿಸಿದ್ದೇ ಅರಬ್ಬರು..  ವ್ಯಾಪಾರಕ್ಕಾಗಿ ಭಾರತಕ್ಕೆ ಬರುತ್ತಿದ್ದ ಅರಬ್ಬರು ಅದನ್ನು ಭಾರತದಿಂದಲೇ ಅಲ್ಲಿಗೆ ತೆಗೆದುಕೊಂಡು ಹೋಗಿದ್ದರು. 

ಕ್ರಿ.ಶ  825ರಲ್ಲಿ ಪರ್ಷಿಯನ್ ಗಣಿತಶಾಸ್ತ್ರಜ್ಞ ಅಲ್ ಖ್ವಾರಿಜ್ಮಿ "ಅಲ್ ಜಾಮ್ ವಲ್- ತಫ್ರೀಖ್ ಬಿಲ್-ಹಿಸಾಬ್ ಅಲ್-ಹಿಂದಿ (الجمع والتفريق بالحساب الهندي‎ ) ಎಂಬ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ ಬರೆಯುತ್ತಾನೆ. ಅಂದರೆ ಈ ಗ್ರಂಥದ ಹೆಸರಿನ ಅರ್ಥವೇ "ಹಿಂದೂ ಸಂಖ್ಯೆಗಳೊಂದಿಗೆ ಲೆಕ್ಕಾಚಾರ ಮಾಡುವುದು" ಅಂತ..! ಇದನ್ನೇ ಹನ್ನೆರಡನೆಯ ಶತಮಾನದಲ್ಲಿ ಲ್ಯಾಟಿನ್ ಭಾಷೆಗೆ "ಅಲ್ಗೊರಿದ್ಮಿ ಡಿ ನ್ಯೂಮೆರೊ ಇಂಡೋರಮ್" ಎಂಬ ಹೆಸರಿನಲ್ಲಿ ಭಾಷಾಂತರಿಸಲಾಯಿತು. 

ಅಬು ಯೂಸುಫ್ ಯಾಕೂಬ್ ಇಬ್ನ್ ಇಶಾಕ್ ಎಸ್ -ಸಬ್ಬಾಹ್ ಅಲ್ ಕಿಂಡಿ ಅನ್ನೋ  ಇಸ್ಲಾಮಿಕ್ ಗಣಿತ ವಿದ್ವಾಂಸ  "ಕಿತಾಬ್ ಫಿ ಇಷ್ಟಿ ಮಾಲ್ ಅಲ್- ಅ ದಾದ್ ಅಲ್ -ಹಿಂದಿಯ್ಯಾಹ್ "  (كتاب في استعمال الأعداد الهندية‎ ) ಅನ್ನುವ  'ಹಿಂದೂ ಅಂಕೆ ಸಂಖ್ಯೆಗಳ ಉಪಯೋಗಗಳ ಬಗ್ಗೆ'' ಎಂಬ ಅರ್ಥ ಇರುವ ನಾಲ್ಕು ಭಾಗಗಳ ಗ್ರಂಥ ರಚಿಸಿದ .

ಅಬು ಅಲ್ - ತಯ್ಯಿಬ್  ಸನದ್ ಇಬ್ನ್  ಅಲಿ ಅಲ್ ಯಹೂದಿ ಎಂಬ ಮೂಲತಃ ಯಹೂದೀ , ಬಳಿಕ ಇಸ್ಲಾಮಿಗೆ ಮತಾಂತರ ಹೊಂದಿದ ಗಣಿತಜ್ಞ  "ಜಿಜ್ ಅಲ್ಸಿಂದ್ ಹಿಂದ್ ಅಲ್ ಕಬೀರ್ "ಎಂಬ ಅರೇಬಿಕ್ ಗ್ರಂಥ ಬರೆದ ಇದು ಭಾರತದಿಂದ ತಂದ ಸಂಸ್ಕೃತ ಗ್ರಂಥದ ಅನುವಾದವಾಗಿತ್ತು . ಖಗೋಳಶಾಸ್ತ್ರದ ಈ ಗ್ರಂಥ ಭಾರತೀಯ ಖಗೋಳಶಾಸ್ತ್ರವನ್ನು ಯೂರೋಪಿಗೆ ಪರಿಚಯಿಸುವ ಕೆಲಸ  ಮಾಡಿತ್ತು. ಈ "ಸಿಂದ್ ಹಿಂದ್" ಎಂಬ ಶಬ್ದ ಸಿಂಧೂ ಮತ್ತು ಹಿಂದೂ ಶಬ್ದದಿಂದ ಪಡೆದುಕೊಂಡದ್ದು... ಅದೇ ರೀತಿ ಸಂಸ್ಕೃತ ಉಚ್ಚಾರ ಮಾಡಲು ಬಾರದ ಅರಬ್ಬಿಗಳು "ಸಿದ್ಧಾಂತ" ಎಂಬ  ಶಬ್ದಕ್ಕೂ  ಈ "ಸಿಂದ್ ಹಿಂದ್" ಎಂಬ ಪದ ಉಪಯೋಗಿಸಿದರು  

ಭಾರತೀಯ ಸಂಖ್ಯಾ ಪದ್ಧತಿಯನ್ನು, ಗಣಿತವಿಜ್ಞಾನವನ್ನು ಮಧ್ಯಪ್ರಾಚ್ಯ ಮತ್ತು ಯೂರೋಪಿಗೆ ಪರಿಚಯಿಸುವ ಕೆಲಸವನ್ನು ಈ ಗ್ರಂಥಗಳೇ ಮಾಡಿದವು ಅಂತ ಈಗಿನ ಇತಿಹಾಸಕಾರರ ಅಭಿಪ್ರಾಯ . ಆದರೆ ಅದಕ್ಕೂ ಮೊದಲೇ, ಅಂದರೆ  ಆರನೆಯ ಶತಮಾನದಲ್ಲೇ  ಸಿರಿಯಾದ ಕ್ರಿಶ್ಚಿಯನ್ ಬಿಷಪ್ ಮತ್ತು ವಿದ್ವಾಂಸ  ಸೆವೆರಸ್ ಸೆಬೊಕ್ಟ್ ಎಂಬಾತ  "ಗಣಿತದಲ್ಲಿ ಗ್ರೀಕರು ಮತ್ತು ಬ್ಯಾಬಿಲೋನಿಯನ್ನರು ಏನೇ ಸಂಶೋಧನೆಗಳನ್ನು, ಸಾಧನೆಗಳನ್ನು ಮಾಡಿರಲಿ , ಜನ ಗ್ರೀಕರನ್ನು ವಿಜ್ಞಾನದ ಪಿತಾಮಹರೆಂದೇ ಕರೆಯಲಿ, ಇಂಥವರೆಲ್ಲ ಒಮ್ಮೆ ಭಾರತೀಯ ಗ್ರಂಥಗಳನ್ನು ಓದಬೇಕು , ಆಗ ಇವರಿಗೆಲ್ಲ ಜಗತ್ತಿನ ಬೇರೆ ಕಡೆ (ಭಾರತದಲ್ಲಿ) ಅದೆಷ್ಟರ ಮಟ್ಟಿಗೆ ಜ್ಞಾನ ಇದೆ ಎಂಬುದು ತಿಳಿಯುತ್ತದೆ" ಅಂತ ಬರೆದಿದ್ದ.  

ಅಲಿ ಇಬ್ನ್ ಯೂಸುಫ್ ಅಲ್ ಖಿಫ್ತಿ ಅನ್ನೋ ಈಜಿಪ್ಷಿಯನ್ ಅರಬ್ ಇತಿಹಾಸಕಾರ ಕೂಡಾ ತನ್ನ " ಕಿತಾಬ್ ಇಖ್ಬಾರ್ ಅಲ್ - ಉಲಾಮಾ ಬಿ ಅಖ್ಬರ್ ಅಲ್ - ಹುಕಮ" ಅನ್ನುವ  " ವಿದ್ವಾಂಸರ ಇತಿಹಾಸ" ಎಂಬ ಅರ್ಥ ಬರುವ ಗ್ರಂಥದಲ್ಲಿ ಭಾರತದಿಂದ ಬಾಗ್ದಾದ್ ಖಲೀಫ ಅಲ್ ಮನ್ಸೂರ್ ನ ಆಸ್ಥಾನಕ್ಕೆ ೭೭೬ನೇ ಇಸವಿಯಲ್ಲಿ ಬಂದಿದ್ದ ವಿಜ್ಞಾನಿಯೊಬ್ಬ ಆಕಾಶಕಾಯಗಳ ಚಾಲನೆ, ಗಾತ್ರ, ದೂರಗಳನ್ನು ನಿಖರ ವಾಗಿ ಅಳತೆ ಮಾಡುವ ಸಿದ್ಧಾಂತವನ್ನು ಸಂಪೂರ್ಣವಾಗಿ ಬಲ್ಲ, ಅತ್ಯಂತ ಕರಾರುವಕ್ಕಾಗಿ ಖಗೋಳಶಾಸ್ತ್ರದ ಲೆಕ್ಕಾಚಾರಗಳನ್ನು ಹಾಕಬಲ್ಲ ಅಂತ ವಿವರಿಸಿದ್ದಾನೆ. ಈತನ ಸಂಸ್ಕೃತ ಗ್ರಂಥವನ್ನೇ ಅರೇಬಿಕ್ ಭಾಷೆಗೆ ಭಾಷಾಂತರ ಮಾಡಲು ಖಲೀಫ ಅಲ್ ಮನ್ಸೂರ್  ಆಜ್ಞೆ ಮಾಡಿದ ಅಂತಲೂ ಬರೆದಿದ್ದಾನೆ. ಇದರ ಪ್ರಕಾರ ಈ ಸಂಸ್ಕೃತ ಗ್ರಂಥದ ಅನುವಾದವೇ "ಜಿಜ್ ಅಲ್ಸಿಂದ್ ಹಿಂದ್ ಅಲ್ ಕಬೀರ್" ಎಂಬ ಅರೇಬಿಕ್ ಗ್ರಂಥ  ಬಹುಶಃ ಇದು ಭಾರತೀಯ ಗಣಿತವಿಜ್ಞಾನಿ ಬ್ರಹ್ಮಗುಪ್ತನ "ಬ್ರಹ್ಮಸ್ಫುಟ ಸಿದ್ಧಾಂತ" ಎಂಬ ಗ್ರಂಥವೇ...!

ಅಬುಲ್ ಹಸನ್ ಅಲ್ ಉಖ್ಲಿದಿಸಿ ಎಂಬ ಗಣಿತ ವಿಜ್ಞಾನಿ ಸುಮಾರು ೯೫೨ರಲ್ಲಿ ರಚಿಸಿದ್ದ "ಕಿತಾಬ್ ಅಲ್-ಫುಸುಲ್ ಫೀ ಅಲ್-ಹಿಸಾಬ್ ಅಲ್ -ಹಿಂದೀ" ಎಂಬ ತನ್ನ ಗ್ರಂಥದಲ್ಲಿ ದಶಮಾಂಶ ಪದ್ಧತಿಯ ಭಿನ್ನರಾಶಿಗಳ ಲೆಕ್ಕಾಚಾರವನ್ನು ಹೇಗೆ ಮಾಡಬಹುದು ಎಂಬುದನ್ನು ವಿವರಿಸಿದ್ದಾನೆ. ಈ ಗ್ರಂಥದ ಹೆಸರೇ ಹೇಳುವ ಹಾಗೆ ಇದರ ಮೂಲವೂ ಹಿಂದೂ ಗಣಿತವೇ... 

೯೮೦ರಲ್ಲಿ ರೋಮ್ ನ ಬಿಷಪ್ ಆಗಿದ್ದ ಗರ್ಬರ್ಟ್ ಎಂಬ ವಿದ್ವಾಂಸ ಯೂರೋಪಿಗೆ ಈ ಹಿಂದೂ ಮೂಲದ ಆದರೆ ಯುರೋಪಿಯನ್ನರು ಅರೇಬಿಕ್ ಅಂದುಕೊಂಡಿದ್ದ ದಶಮಾಂಶ ಗಣಿತವನ್ನು, ಸಂಖ್ಯಾ ಪದ್ಧತಿಯನ್ನು ಪರಿಚಯಿಸಿ ಅದನ್ನು ಜನಪ್ರಿಯಗೊಳಿಸಲು ಶ್ರಮಿಸಿದ. ಬಿಷಪ್ ಆಗಿ ತನ್ನ ಪ್ರಭಾವವನ್ನು ಬಳಸಿ ಭಾರತೀಯ ಸಂಖ್ಯಾಪದ್ಧತಿಯನ್ನು ಪಸರಿಸಲು ಶ್ರಮಿಸಿದ್ದ ಈ ಗರ್ಬರ್ಟ್ ಬಳಿಕ ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಪರಮೋಚ್ಚ ಧರ್ಮಗುರು ಪೋಪ್ ಪಟ್ಟಕ್ಕೇರಿ ಪೋಪ್ ಎರಡನೆಯ ಸಿಲ್ವೆಸ್ಟರ್ ಅನ್ನಿಸಿಕೊಂಡ. ಆ ಬಳಿಕ ಭಾರತೀಯ ಗಣಿತಪದ್ಧತಿಯನ್ನು ಪಸರಿಸುವ ಕೆಲಸವನ್ನು ಇನ್ನಷ್ಟು ಹೆಚ್ಚಿಸಿದ. ಹೀಗೆ ಭಾರತೀಯ ಹಿಂದೂ ಗಣಿತ ಪದ್ಧತಿ ಮುಸ್ಲಿಮರಿಂದ ಯೂರೋಪಿನ ಕ್ರಿಶ್ಚಿಯನ್ನರಿಗೆ ತಲುಪಿತು. ಇದರಿಂದಾಗಿ ಯೂರೋಪಿಗೆ ಭಾರತೀಯ ದಶಮಾನ ಪದ್ಧತಿಯ ಪರಿಚಯ ಶುರುವಾಯಿತು... 

ಬಾರ್ಸಿಲೋನಾದ ಕ್ರಿಶ್ಚಿಯನ್ ಧರ್ಮಗುರು ಲುಪಿಟಸ್, ಲಿಯೊನಾರ್ಡೊ ಫಿಬ್ಬೊನಾಶಿ ಎಂಬ ಗಣಿತಶಾಸ್ತ್ರಜ್ಞ  ಭಾರತೀಯ ದಶಮಾನ ಪದ್ಧತಿಯನ್ನು ಪ್ರಚಲಿತಗೊಳಿಸಲು ಶ್ರಮಿಸಿದರು  ಆದರೆ ಹನ್ನೆರಡನೆಯ ಶತಮಾನದವರೆಗೆ ಯೂರೋಪಿನಲ್ಲಿ ಈ ಪದ್ಧತಿ ತಕ್ಕ ಮಟ್ಟಿಗೆ ಜನಪ್ರಿಯವಾಗತೊಡಗಿತಾದರೂ ಬ್ರಿಟನ್ನಿನಂಥ ಆಗಿನ ಕಾಲದ ಸೂಪರ್ ಪವರ್ ದೇಶಗಳಿಗೆ ಈ ಪದ್ಧತಿ ಹದಿನೈದನೆಯ ಶತಮಾನದವರೆಗೆ ತಲುಪಿರಲೇ ಇಲ್ಲ... ನೀವೊಮ್ಮೆ ಊಹಿಸಿಕೊಳ್ಳಿ. ಹದಿನೈದನೆಯ ಶತಮಾನದ ಬ್ರಿಟಿಷರಿಗೆ ಸೊನ್ನೆಎಂಬ ಸಂಖ್ಯೆ ಇದೆ ಎಂಬುದೇ ತಿಳಿದಿರಲಿಲ್ಲ...! 

ಆದರೆ ದುರಂತವೆಂದರೆ ಯೂರೋಪಿನವರಿಗೆ ಇದು ಭಾರತದ ಹಿಂದೂ ವೇದ ಕಾಲೀನ ಗಣಿತ ಪದ್ಧತಿಎಂದೂ ಇದರ ಮೂಲ ಗ್ರೀಕ್  ಮತ್ತು ಬ್ಯಾಬಿಲೋನ್ ನಾಗರೀಕತೆಗಿಂತಲೂ ಹಳೆಯದಾದ ಸನಾತನ ವೇದಕಾಲೀನ ನಾಗರೀಕತೆಗಳೆಂಬ ಸಂಗತಿಯೇ ಗೊತ್ತಿರಲಿಲ್ಲ..! 

ಜಗತ್ತಿನ ವೈಜ್ಞಾನಿಕ ಬೆಳವಣಿಗೆಗಳ ಇತಿಹಾಸ ಬರೆದ ಯುರೋಪಿಯನ್ ವಿದ್ವಾಂಸರೆಲ್ಲರೂ ಅದನ್ನು ಯೂರೋಪ್ ಕೇಂದ್ರಿತವನ್ನಾಗಿಸಿದರು. ಎಲ್ಲಾ ವೈಜ್ಞಾನಿಕ, ಗಣಿತ ಸಂಶೋಧನೆಗಳಿಗೂ ಮೂಲವೇ ಯೂರೋಪ್, ಎಲ್ಲದಕ್ಕೂ ಗ್ರೀಕ್, ಬ್ಯಾಬಿಲೋನಿಯನ್, ಸುಮೇರಿಯನ್ ಈಜಿಪ್ಷಿಯನ್ ರೋಮನ್ ನಾಗರೀಕತೆಗಳ ಮೂಲ ಎಂಬುದನ್ನೇ ಶತಶತಮಾನಗಳ ಕಾಲ ಬರೆದರು, ಗ್ರಂಥಗಳನ್ನು ಪ್ರಕಟಿಸಿದರು, ಪ್ರಚುರಪಡಿಸಿದರು.. ಮತ್ತು ಇಡೀ ಜಗತ್ತು ಇದನ್ನೇ ಸತ್ಯವೆಂದು ನಂಬಿತು ಕೂಡಾ... 

ಆದರೆ ಯಾವಾಗ ಆಧುನಿಕ ಗಣಿತ ವಿಜ್ಞಾನದ ಮೂಲ, ಆಧುನಿಕ ಸಂಖ್ಯಾಪದ್ಧತಿಯ ಮೂಲ ಭಾರತ ಎಂದು ತಿಳಿಯಿತೋ ಆಗಲೂ ಅದರ ಕಾಲಮಾನ ಕ್ರಿಸ್ತ ಶಕದ  ನಂತರವೇ ಎಂದು ಪ್ರತಿಪಾದಿಸತೊಡಗಿದರು... ಯಜುರ್ವೇದ ಸಂಹಿತೆಯ ಅನ್ನ ಹೋಮ ಮಂತ್ರದಲ್ಲಿರುವ ದಶ, ಶತ, ಸಹಸ್ರ, ಅಯುತ, ನಿಯುತ, ಅರ್ಬುದ, ನ್ಯಾರ್ಬುದ, ಸಮುದ್ರ, ಮಧ್ಯ, ಅಂತ, ಪರಾರ್ಧ ಎಂಬ ಸಂಖ್ಯಾ ಸ್ಥಾನಗಳ ಬಗೆಗಿನ ಮಾಹಿತಿಯನ್ನು ನಿರ್ಲಕ್ಷಿಸಿದರು. ಕ್ರಿಸ್ತ ಶಕ ಆರನೆಯ ಶತಮಾನದಲ್ಲಷ್ಟೇ ಭಾರತೀಯ ಗಣಿತಜ್ಞ ಬ್ರಹ್ಮ ಗುಪ್ತ ಮೊಟ್ಟಮೊದಲ ಬಾರಿಗೆ  ಸೊನ್ನೆಯ ಉಪಯೋಗವನ್ನು ದಶಮಾನ ಪದ್ಧತಿಯನ್ನು ಕಂಡುಹಿಡಿದ ಅಂತಲೇ ಇವತ್ತಿಗೂ ವಿವರಿಸಲಾಗುತ್ತದಾದರೂ ಯಜುರ್ವೇದ ಅದು ಹೇಗೆ ದಶಮಾನ ಪದ್ಧತಿಯ ಸಂಖ್ಯಾ ಸ್ಥಾನಗಳನ್ನು ಹೇಳಿದೆ ಎಂಬುದಕ್ಕೆ ವಿವರಣೆಗಳಿರುವುದಿಲ್ಲ... ಉಪನಿಷತ್ತಿನ "ಪೂರ್ಣಮದಹ ಪೂರ್ಣಮಿದಂ... " ಎಂಬ ಶ್ಲೋಕದಲ್ಲಿನ ಪೂರ್ಣ ಎಂಬುದು ಕೂಡಾ ಶೂನ್ಯದ ಬಗೆಗಿನ ವಿವರಣೆಯೇ ಆದರೂ ಸೊನ್ನೆಯ ಅರಿವು ಕ್ರಿಸ್ತಪೂರ್ವದಲ್ಲಿ ಭಾರತೀಯರಿಗಿರಲಿಲ್ಲ ಎಂಬ ಮೊಂಡು ವಾದವನ್ನೇ ಮುಂಡಿದಿಡಲಾಗುತ್ತದೆ. 

ಶ್ರೌತ ಕರ್ಮಗಳ ವಿವರಣೆ ನೀಡುವ ಭೌಧಾಯನ ಸುಲ್ಭ ಸೂತ್ರಗಳಲ್ಲಿರುವ ಪೈಥಾಗೋರಸನ ಪ್ರಮೇಯದ ಅಂಶಗಳು, ಪೈಥಾಗೋರಸ್ ತ್ರಿವಳಿ ಸಂಖ್ಯೆಗಳ ವಿವರಣೆಗಳನ್ನೂ ಇದೆಲ್ಲ ಕ್ರಿ.ಪೂ ಎಂಟನೆಯ ಶತಮಾನದ ಕಾಲದ್ದೆಂದೂ ನಿರ್ಲಕ್ಷಿಸಲಾಗುತ್ತದೆ.  ಇದಕ್ಕಿಂತಲೂ ಹಿಂದೆ ಅಂದರೆ ಕ್ರಿಪೂ ಎರಡು ಸಾವಿರ ವರ್ಷಗಳಷ್ಟು ಹಿಂದೆಯೇ ಈಜಿಪ್ಷಿಯನ್ನರಿಗೆ ಮತ್ತು ಬ್ಯಾಬಿಲೋನಿಯನ್ನರಿಗೆ ಇದರ ಬಗ್ಗೆ ತಿಳಿದಿತ್ತು ಎಂಬ ವಾದವನ್ನು ಮುಂದಿಡಲಾಗುತ್ತದೆ... ವೇದಕಾಲೀನ ಹಿಂದೂಗಳಿಗೆ ಇದ್ದ  ಗಣಿತಜ್ಞಾನವನ್ನು ಒಪ್ಪಿಕೊಳ್ಳಲು ಸಹಿಸಿಕೊಳ್ಳಲು ಸಾಧ್ಯವಾಗದ ಇತಿಹಾಸಕಾರರೆಲ್ಲಾ  ಮುಂದಿಡುವ ವಾದವೆಂದರೆ ಇದಕ್ಕೆಲ್ಲಾ ಪ್ರಾಕ್ತನ ಪುರಾವೆಗಳಿಲ್ಲ ...ಗ್ರಂಥಗಳಿಲ್ಲ ಎಂಬುದು... ಆದರೆ ವೇದಕಾಲದಲ್ಲಿ ಎಲ್ಲಾ ಗ್ರಂಥಗಳೂ ಮೌಖಿಖವಾಗಿಯೇ ಬಳಕೆಯಲ್ಲಿತ್ತು ಎಂಬ ಅಂಶವನ್ನು ಕಡೆಗಣಿಸಲಾಗುತ್ತದೆ... 

ಕ್ರಿಸ್ತ ಪೂರ್ವ ಆರನೆಯ ಶತಮಾನದಲ್ಲೇ ತಕ್ಷಶಿಲೆಯಂಥಾ ಅದ್ಭುತ ವಿಶ್ವವಿದ್ಯಾಲಯವನ್ನೇ ನಿರ್ಮಿಸಿದ್ದರು  ಭಾರತೀಯರು. ಆದರೆ ತಕ್ಷಶಿಲೆ ಮತ್ತು ಅಂತದ್ದೇ ಇತರ ವಿಶ್ವವಿದ್ಯಾಲಗಳಾದ, ಲಲಿತಗಿರಿ, ಪುಷ್ಪಗಿರಿ, ನಳಂದಾ, ಓದಂತಪುರಿ, ವಿಕ್ರಮಶಿಲಾ, ವಲಭಿ ಮುಂತಾದ ಬೃಹತ್ ವಿಶ್ವವಿದ್ಯಾಲಯಗಳನ್ನೂ, ಅವುಗಳಲ್ಲಿದ್ದ ಕೋಟಿಗಟ್ಟಲೆ ಗ್ರಂಥರಾಶಿಯನ್ನೂ ಸುಟ್ಟು  ಹಾಳುಗೆಡವಿದ ಇಸ್ಲಾಮಿಕ್ ದಾಳಿಕೋರರ ಬಗ್ಗೆ ಯಾರೂ ಮಾತಾಡುವುದಿಲ್ಲ. ಭಾರತದಲ್ಲಿದ್ದ ಅಷ್ಟೂ ಜ್ಞಾನಸಂಪತ್ತನ್ನು, ಗ್ರಂಥಗಳನ್ನು ಸುಟ್ಟು ನಾಶ ಮಾಡಿದ ಮೇಲೂ ಇನ್ನೂ ಅಪಾರ ಪ್ರಮಾಣದಲ್ಲಿ ಗ್ರಂಥಗಳು ಉಳಿದಿವೆ ಎಂದಾದರೆ ಅದಕ್ಕೆ ನಮ್ಮಲ್ಲಿದ್ದ ಮೌಖಿಕ ಪರಂಪರೆಯೂ ಕಾರಣ... ಇಸ್ಲಾಮಿಕ್ ದಾಳಿಗೆ ಒಳಗಾದ ದೇಶಗಳೆಲ್ಲವೂ, ಉದಾಹರಣೆಗೆ ಇರಾನ್, ತಮ್ಮಲ್ಲಿದ್ದ ಪ್ರಾಚೀನ ಜ್ಞಾನ, ಧಾರ್ಮಿಕ ಜೀವನಪದ್ಧತಿ ಎಲ್ಲವನ್ನೂ ಕಳೆದುಕೊಂಡು, ಅವುಗಳ ಇತಿಹಾಸದ ಕುರುಹೂ ಇಲ್ಲದಂತೆ ಬದಲಾಗಿ ಹೋದವು. 

ತಾನು ದಾಳಿ ಮಾಡಿದ ಕಡೆಯೆಲ್ಲಾ ಗ್ರಂಥಗಳನ್ನು, ಗ್ರಂಥಾಲಯಗಳನ್ನು, ಶಾಲೆಗಳನ್ನು, ವಿಶ್ವವಿದ್ಯಾಲಗಳನ್ನು ಸುಟ್ಟು ನಾಶ ಮಾಡಿದ ಇಸ್ಲಾಮಿಕ್  ದಾಳಿಕೋರರು  ಅದೇ ತಮ್ಮ ಇಸ್ಲಾಮಿಕ್ ಆಡಳಿತವಿದ್ದ ಇರಾಕಿನ ಬಾಗ್ದಾದಿನಲ್ಲಿ ಭಾರೀ ಬೃಹತ್ ಗ್ರಂಥ ಭಂಡಾರವನ್ನು ಹೊಂದಿದ್ದರು...! ಹೆಚ್ಚಿನೆಲ್ಲ ಭಾರತೀಯ ವೈಜ್ಞಾನಿಕ, ಗಣಿತ, ವಾಸ್ತುಶಿಲ್ಪ ಗ್ರಂಥಗಳೆಲ್ಲ ಅರೇಬಿಕ್, ಪರ್ಷಿಯನ್ ಮುಂತಾದ ಭಾಷೆಗಳಿಗೆ ತರ್ಜುಮೆಯಾಗುತ್ತಿದ್ದದ್ದು, ಪ್ರತಿಗಳಾಗುತ್ತಿದ್ದದ್ದು ಇಲ್ಲಿಯೇ... ಇಸ್ಲಾಮಿನ ಮೂರನೆಯ ಅಬ್ಬಾಸಿದ್ ಖಿಲಾಫತ್ ಸ್ಥಾಪಿಸಿದ್ದ ಈ ಬೃಹತ್ ಗ್ರಂಥಾಲಯಕ್ಕೆ "ಬೆಯ್ಟ್ ಅಲ್ - ಹಿಕ್ಮಾಹ್" (بيت الحكمة‎,) ಎಂಬ ಹೆಸರಿತ್ತು. ಇದರ ಅರ್ಥ 'ಜ್ಞಾನದ ಮನೆ' ಅಂತ..! ಸರಿಸುಮಾರು ಹನ್ನೆರಡನೆಯ ಶತಮಾನದವರೆಗೂ ಅಂದರೆ ಭಕ್ತಿಯಾರ್ ಖಿಲ್ಜಿ ಭಾರತಕ್ಕೆ ದಾಳಿ ಮಾಡಿ ನಮ್ಮ ನಳಂದಾ ವಿಶ್ವವಿದ್ಯಾಲಯವನ್ನು ಸುಟ್ಟು ಹಾಕುವಾಗಲೂ ಈ ಗ್ರಂಥಾಲಯ ಇತ್ತು. ಯಾವ ಮುಸ್ಲಿಮ ದಾಳಿಕೋರನೂ ಈ ಗ್ರಂಥಾಲಯವನ್ನು ದಾಳಿಮಾಡಿ ನಾಶಗೊಳಿಸಲಿಲ್ಲ...! 

ತಾವು ದಾಳಿ ಮಾಡಿದ್ದ ಕಡೆಯೆಲ್ಲ ಗ್ರಂಥಾಲಯಗಳನ್ನು ಸುಟ್ಟುಹಾಕಿದ ಮುಸ್ಲಿಂ ದಾಳಿಕೋರ ಸೈನ್ಯ ಯಾಕೆ ತಮ್ಮದೇ ಖಿಲಾಫತ್ತಿನ ತಜಧಾನಿ ಬಾಗ್ದಾದಿನಲ್ಲಿನ ಅತ್ಯಂತ ಬೃಹತ್ ಗ್ರಂಥಾಲಯವನ್ನು ಸುಟ್ಟು ಹಾಕಲಿಲ್ಲ ಎಂಬುದು ಇವತ್ತಿಗೂ ಅಚ್ಚರಿಯ ವಿಷಯವೇ..! ಆದರೆ ಮಂಗೋಲಿಯಾದ ದಾಳಿಕೋರ ಚೆಂಗೀಸ್ ಖಾನನ ಮೊಮ್ಮಗ ಹುಲಗೂ ಖಾನ್ ಎಂಬಾತ ೧೨೫೮ರಲ್ಲಿ ಬಾಗ್ದಾದಿನ ಮೇಲೆ ದಾಳಿ ಮಾಡಿ ಈ ಅಪೂರ್ವ ಗ್ರಂಥಾಲಯವನ್ನು ಸುಟ್ಟು ಹಾಕಿದ..! 

ಗಣಿತ ಶಾಸ್ತ್ರ ಸೇರಿದಂತೆ ಜಗತ್ತಿನ ವಿಜ್ಞಾನ ಶಾಖೆಗಳಿಗೆ ಪ್ರಾಚೀನ  ಭಾರತೀಯರ ಕೊಡುಗೆಗಳನ್ನು ಸಾತವಾಗಿ ಕಡೆಗಣಿಸುತ್ತಾ ಬರಲಾಗಿದೆ.. ಅನೇಕ ಹೊಸ ಹೊಸಾ ಪುರಾವೆಗಳು ಸಿಕ್ಕರೂ ಇವತ್ತಿಗೂ ಜಗತ್ತಿನ ವೈಜ್ಞಾನಿಕ ಇತಿಹಾಸ ಬದಲಾಗುತ್ತಿಲ್ಲ... ಅದೇ ಹಳೆಯ ಸುಳ್ಳುಗಳನ್ನೇ ಪುನರಾವರ್ತಿಸಲಾಗುತ್ತದೆ... ಇವತ್ತಿಗೂ ದಶಮಾನ ಪದ್ಧತಿಯಾಗಲೀ ಜಗತ್ತು ಅನುಸರಿಸುತ್ತಿರುವ ಸಂಖ್ಯಾಪದ್ಧತಿಯಾಗಲೀ ಹಿಂದೂ ಮೂಲವಾಗಿದ್ದರೂ, ಭಾರತೀಯವಾಗಿದ್ದರೂ ಇವತ್ತಿಗೂ ಅದನ್ನು ಅರೇಬಿಕ್ ಅಂಕೆಗಳೆಂದೇ, ಅರೇಬಿಕ್ ಪದ್ಧತಿಯೆಂದೇ ಕರೆಯಲಾಗುತ್ತಿದೆ... ಕೆಲವೊಮ್ಮೆ 'ಇಂಡೋ-ಅರೇಬಿಕ್' ಅನ್ನೋ ಹೆಸರಿನಿಂದ ಕರೆಯಲಾಗುತ್ತದಾದರೂ ಅರೇಬಿಕ್ ಮೂಲದ್ದೆಂದೇ ವ್ಯಾಪಕವಾಗಿ ಕರೆಯಲಾಗುತ್ತದೆ... ಗಣಿತವಿಜ್ಞಾನದ ಶಾಖೆಗಳಾದ ಅಲ್ಜೀಬ್ರಾ ಭಾರತದಲ್ಲಿಯೇ  ಹುಟ್ಟಿದ್ದಕ್ಕೆ ಪುರಾವೆಗಳಿದ್ದರೂ ಇದು ಅರಬ್ಬರ ಸಂಶೋಧನೆ ಅಂತಲೇ ಇವತ್ತಿಗೂ ಬೋಧಿಸಲಾಗುತ್ತಿದೆ. ನ್ಯೂಟನ್ನನಿಗಿಂತ ಸುಮಾರು ನೂರಿನ್ನೂರು ವರ್ಷಗಳಷ್ಟು ಮೊದಲೇ ಕೇರಳದ ಗಣಿತಶಾಸ್ತ್ರಜ್ಞರು ಟ್ರಿಗೊನೊಮೆಟ್ರಿ ಮತ್ತು ಕ್ಯಾಲ್ಕುಲಸ್ ಸಿದ್ಧಾಂತಗಳನ್ನು ಅನ್ವೇಷಿಸಿದ್ದರು...! ಆದ್ರೆ  ಭಾರತೀಯರಿಗೆ ಇವತ್ತಿಗೂ ಗಣಿತಶಾಸ್ತ್ರದಲ್ಲಿ ಸಿಗಬೇಕಾದ ಜಾಗತಿಕ ಮನ್ನಣೆ ಸಿಕ್ಕಿಲ್ಲ... ಅದು ಸಿಗುವವರೆಗೂ ನಾವು ಕೊಡುಗೆಗಳನ್ನು ಸತತವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಬಗ್ಗೆ ಪ್ರಸ್ತಾಪಗಳನ್ನು ಮಾಡಬೇಕಿದೆ, ಹೋರಾಟಗಳನ್ನೂ ಮಾಡಬೇಕಿದೆ... 

#ಅನಂತಕುಮಾರಹೆಗಡೆ

Related posts