ಕಿತ್ತೂರು ರಾಣಿ ಚೆನ್ನಮ್ಮಾಜಿಯವರ ಪುಣ್ಯತಿಥಿ!
ಜನ್ಮಭೂಮಿಗೋಸ್ಕರ ಪ್ರಾಣ ತೆತ್ತ ಧೀರೆ, ಕಿತ್ತೂರು ರಾಣಿ ಚೆನ್ನಮ್ಮಾಜಿಯವರ ಪುಣ್ಯತಿಥಿಯಿಂದು...
ಮಹಾ ಸ್ವಾಭಿಮಾನಿ ಹೆಣ್ಣುಮಗಳಾಕೆ. ತನ್ನ ತಾಯಿನೆಲದ ಮೇಲೆ ಪರಕೀಯರ ದಬ್ಬಾಳಿಕೆಯನ್ನು ಸಹಿಸದೆ ತಿರುಗಿಬಿದ್ದು ಬಿಚ್ಚುಗತ್ತಿ ಹಿರಿದು ಹೋರಾಡಿದ ವೀರವನಿತೆಯಾಕೆ. ತನಗೆ ಜನ್ಮ ನೀಡಿದ ಮಣ್ಣಿನ ಋಣ ತೀರಿಸಲು, ತನ್ನ ರಾಜ್ಯದ ಜನರ ಹಿತರಕ್ಷಣೆಗೋಸ್ಕರ ಪ್ರಾಣವನ್ನೇ ಪಣಕ್ಕಿಟ್ಟ ಧೀರೆಯಾಕೆ... ತನ್ನ ರಾಜ್ಯವನ್ನು ಕುತಂತ್ರದಿಂದ ಕಬಳಿಸಲು ಬಂದ ಬ್ರಿಟಿಷರ ವಿರುದ್ಧ ಸೆಟೆದು ನಿಲ್ಲುವ ಧೈರ್ಯ ತೋರಿದ ಸಾಹಸಿಯಾಕೆ... ತನ್ನ ಕಿತ್ತೂರು ರಾಜ್ಯದ ಮೇಲೆ ಬ್ರಿಟಿಷರ ಪಾರುಪತ್ಯೆಯನ್ನು ಸಹಿಸದೆ, ಅವರ ಭಾರೀ ಸೈನ್ಯವನ್ನೆದುರಿಸಿ ಹೋರಾಡಿ ಸೋಲಿಸಿದ ಭಾರತದ ಪ್ರಪ್ರಥಮ ರಾಣಿಯಾಕೆ.
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊಟ್ಟಮೊದಲ ಮಹಿಳೆಯೆಂದರೆ ಅದು ಕಿತ್ತೂರಿನ ರಾಣಿ ಚೆನ್ನಮ್ಮಾಜಿಯವರೇ... ಸುಮಾರು ಇಪ್ಪತ್ತು ಸಾವಿರ ಸೈನಿಕರಿದ್ದ ಬೃಹತ್ ಬ್ರಿಟಿಷ್ ಸೈನ್ಯವನ್ನು ಎದುರಿಸಿ, ತಾನೇ ಸ್ವತಃ ಕುದುರೆ ಏರಿ, ಕತ್ತಿ ಹಿರಿದು ಹೋರಾಡಿ, ಬ್ರಿಟಿಷ್ ಕಲೆಕ್ಟರ್ ಸೈಂಟ್ ಜಾನ್ ಥ್ಯಾಕರೇಯನ್ನು ಕೊಂದು, ಬ್ರಿಟಿಷರ ವಿರುದ್ಧ ಗೆದ್ದು ಬೀಗಿದ ಮೊದಲ ಭಾರತೀಯ ರಾಣಿಯೆಂದರೆ ಅದು ಚೆನ್ನಮ್ಮಾಜಿಯವರೇ...
ಕಿತ್ತೂರಿನ ರಾಣಿ ಚೆನ್ನಮ್ಮ ಎಂಬ ಈ ಹೆಣ್ಣುಮಗಳು ತನ್ನ ಅಸಾಮಾನ್ಯ ಧೈರ್ಯ ಸಾಹಸಗಳಿಂದ, ಮತ್ತು ತನ್ನ ನಂಬುಗೆಯ ಬಂಟರಾದ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಗುರುಸಿದ್ದಪ್ಪ ಮುಂತಾದವರು ಮತ್ತು ಕಿತ್ತೂರಿನ ಪರಾಕ್ರಮಿ ದೇಶಭಕ್ತ ಸೈನಿಕರ ನೆರವಿನಿಂದ ಬಲಾಢ್ಯ ಬ್ರಿಟಿಷರನ್ನು ಸೋಲಿಸಿದರು. ಮತ್ತು ಆ ಮೂಲಕ ಕಿತ್ತೂರಿನಂಥ ಪುಟ್ಟ ರಾಜ್ಯ ಕೂಡಾ ಬ್ರಿಟಿಷರಂಥ ಬಲಶಾಲಿ ವೈರಿಗಳನ್ನು ಅದು ಹೇಗೆ ಸದೆಬಡಿಯಬಹುದೆಂಬುದನ್ನು ಜಗತ್ತಿಗೇ ಸಾರಿದರು. ಆದರೆ ಅದೇ ಚೆನ್ನಮ್ಮ ಸೋತು ಬ್ರಿಟಿಷರಿಗೆ ಸೆರೆಸಿಕ್ಕುವಂತಾದದ್ದು ಕೂಡಾ ಮಲ್ಲಪ್ಪ ಶೆಟ್ಟಿ, ಹಾವೇರಿ ವೆಂಕೋಬರಾಯ ಮುಂತಾದ ತನ್ನ ಸ್ವಂತದ ಜನರ ಕುತಂತ್ರದಿಂದಾಗಿಯೇ... ತನ್ನ ಜೊತೆಗಿದ್ದವರ ದ್ರೋಹದಿಂದಾಗಿಯೇ...
ಬ್ರಿಟಿಷರ ಕುಯುಕ್ತಿಯಿಂದ ಯುದ್ಧದಲ್ಲಿ ಸೋತು, ಚೆನ್ನಮ್ಮಾಜಿಯವರು ಅವರ ಸೆರೆಯಾಳಾಗುತ್ತಾರೆ. ೧೮೨೪ ರ ಡಿಸೆಂಬರ್ ೫ನೇ ತಾರೀಕಿಗೆ ಬ್ರಿಟಿಷರಿಂದ ಬಂಧಿಸಲ್ಪಟ್ಟ ಚೆನ್ನಮ್ಮಾಜಿ ಬೈಲಹೊಂಗಲದ ಸೆರೆಮನೆಯಲ್ಲಿಯೇ ೧೮೨೯ರ ಫೆಬ್ರವರಿ ೨ನೇ ತಾರೀಕು ಕಿತ್ತೂರನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸುವ ಕನಸು ಕಾಣುತ್ತಲೇ ಲಿಂಗೈಕ್ಯರಾಗುತ್ತಾರೆ. ಇಂದಿಗೆ ಆ ಮಹಾತಾಯಿ ನಮ್ಮನ್ನಗಲಿ ನೂರಾತೊಂಭತ್ತೆರಡು ವರ್ಷಗಳೇ ಕಳೆದುಹೋದವು...
ಇಂತಹ ಧೀರಮಾತೆಯನ್ನು ಹೆತ್ತ ಈ ಕರುನಾಡು ಧನ್ಯ... ಚೆನ್ನಮ್ಮಾಜಿಯವರ ಪುಣ್ಯತಿಥಿಯ ಈ ಸಂದರ್ಭದಲ್ಲಿ ಆ ವೀರವನಿತೆಯ ಅಪ್ರತಿಮ ದೇಶಭಕ್ತಿಗೆ, ಅವರ ತ್ಯಾಗ ಬಲಿದಾನಕ್ಕೆ ಶತಶತ ನಮನಗಳನ್ನು ಸಲ್ಲಿಸುತ್ತಿದ್ದೇನೆ...
#ಅನಂತಕುಮಾರಹೆಗಡೆ