Infinite Thoughts

Thoughts beyond imagination

ಸೌರ ಯುಗಾದಿ ಮತ್ತು ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು...

ಸೌರ ಯುಗಾದಿ ಮತ್ತು ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು... 

ಚಾಂದ್ರಮಾನದ ಯುಗಾದಿಯಂತೆಯೇ ಇದು ಸೌರಮಾನ ಯುಗಾದಿ.. ಬಹುತೇಕ ಈ ದಿನವನ್ನು ವಿಷು ಸಂಕ್ರಮಣ ಎಂಬ ಹೆಸರಿನಿಂದಲೇ ಕರೆಯುವುದು ರೂಢಿಗತವಾಗಿ ಬಂದ ಕ್ರಮ. ಸೂರ್ಯನು  ಮೇಷ ರಾಶಿಯನ್ನು ಪ್ರವೇಶಿಸುವ ಈ ಮೇಷ ಸಂಕ್ರಮಣದ ದಿನವನ್ನೇ ವಿಷು ಅಂತ ಕರೆಯುತ್ತಾರೆ. ಸೌರಮಾನ ಯುಗಾದಿಯಂದೇ ಅಂದರೆ ಸೌರಪದ್ಧತಿಯ ಪಂಚಾಂಗದ ಪ್ರಕಾರ ಹೊಸ ವರುಷದ ಮೊದಲನೆಯ ದಿನವೇ ಜನಿಸಿದ್ದರು ಸಂವಿಧಾನಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್. ಹಾಗಾಗಿ ನಮಗೆಲ್ಲ ಇಂದು ಎರಡೆರಡು ಕಾರಣಕ್ಕಾಗಿ  ಸಂಭ್ರಮಾಚರಣೆ...!  

ಈ ಬಾರಿ ನಾವು ಡಾ. ಭೀಮರಾವ್ ರಾಮಜೀ ಅಂಬೇಡ್ಕರ್ ಅವರ ನೂರಾಮೂವತ್ತನೆಯ ಜಯಂತಿಯನ್ನಾಚರಿಸುತ್ತಿದ್ದೇವೆ. ಆಧುನಿಕ ಭಾರತದ ಮಹಾನ್ ವಿದ್ವಾಂಸ , ನಿಜವಾದ ಪಂಡಿತ ಡಾ. ಅಂಬೇಡ್ಕರ್ ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಅತ್ಯಂತ ಶ್ರೇಷ್ಠ ವಿದ್ಯಾರ್ಥಿಗಳ ಪೈಕಿ ಮೊತ್ತ ಮೊದಲ ಸ್ಥಾನ ಪಡೆದವರು... ಭಾರತದ ಮೊಟ್ಟಮೊದಲ ಅರ್ಥ ಶಾಸ್ತ್ರಜ್ಞನೂ ಅವರೇ..! ಆದರೆ ಅರ್ಥಶಾಸ್ತ್ರಜ್ಞನಾಗಿ ಅವರ ಪ್ರತಿಭೆಯನ್ನು ಸ್ವತಂತ್ರ ಭಾರತದ ರಾಜಕೀಯ ವ್ಯವಸ್ಥೆ ಗುರುತಿಸಲೇ ಇಲ್ಲ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಡಾಕ್ಟರೇಟ್ ಪದವಿ ಪಡೆಯಲು ಡಾ.ಅಂಬೇಡ್ಕರ್ ಸಲ್ಲಿಸಿದ ಪ್ರೌಢ ಪ್ರಬಂಧ "The Problem of the Rupee – Its Origin and Its Solution" ಅನ್ನೇ  ಆಧರಿಸಿ ಬ್ರಿಟನ್ನಿನ ಹಿಲ್ಟನ್ ಯಂಗ್ ನೇತೃತ್ವದ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫಿನಾನ್ಸ್" ತನ್ನ ವರದಿ ನೀಡಿತ್ತು. ಈ ವರದಿಯನ್ನಾಧರಿಸಿಯೇ ಭಾರತದ "ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ" ಸ್ಥಾಪನೆಯಾಯಿತು...! 

ಭಾರತಮಾತೆಯ ಈ ಮಹಾನ್ ಸುಪುತ್ರನನ್ನು ಸ್ವತಂತ್ರ ಭಾರತದಲ್ಲಿ ಆಡಳಿತ ನಡೆಸಿದ ಹೆಚ್ಚಿನೆಲ್ಲಾ ಸರಕಾರಗಳೂ ಸತತವಾಗಿ ಕಡೆಗಣಿಸಿದವು. ಇಂಥ ಮಹಾತ್ಮನಿಗೆ 'ಭಾರತರತ್ನ ' ಪ್ರಶಸ್ತಿ ಸಿಗಬೇಕಾದರೆ ೧೯೯೦ನೇ ಇಸವಿಯವರೆಗೆ ಕಾಯಬೇಕಾಯಿತು... ಅಂದರೆ ಡಾ. ಅಂಬೇಡ್ಕರ್ ಮರಣ ಹೊಂದಿ ಸರಿಸುಮಾರು ಮೂವತ್ತನಾಲ್ಕು ವರ್ಷಗಳ ನಂತರ ಮರಣೋತ್ತರವಾಗಿ ಅವರಿಗೆ ಈ ಪ್ರಶಸ್ತಿ ಸಂದಿತು..! 

ಡಾ.ಅಂಬೇಡ್ಕರ್  ಅವರ ಜನುಮದಿನವಾದ ಏಪ್ರಿಲ್ ೧೪ ನೇ ತಾರೀಖನ್ನು ಪ್ರತೀ ವರ್ಷವೂ 'ರಾಷ್ಟ್ರೀಯ ಸಮರಸತಾ ದಿವಸ' ಅಂತ ಆಚರಿಸಲು ನಿರ್ಧರಿಸಲಾಗಿದೆ. ಈ ಘೋಷಣೆಯನ್ನು ಡಾ. ಅಂಬೇಡ್ಕರ್ ಅವರ ೧೨೫ ನೇ ಜಯಂತಿಯಂದು ಮಾಡಲಾಯಿತು..! 

ಡಾ. ಅಂಬೇಡ್ಕರ್ ಅವರು ತಮ್ಮ ಕೊನೆಯ ದಿನಗಳನ್ನು ಕಳೆದ ದೆಹಲಿಯ ಅಲಿಪುರ ರಸ್ತೆಯ ೨೬ ನೇ ನಂಬರ್ ನಿವಾಸವನ್ನು ಸುಮಾರು ನೂರು ಕೋಟಿ  ರೂಪಾಯಿಯಲ್ಲಿ ಅಭಿವೃದ್ಧಿ ಪಡಿಸಿ ಅದನ್ನು ರಾಷ್ಟ್ರೀಯ ಸ್ಮಾರಕ ಅಂತ ಘೋಷಿಸಿ ೨೦೧೮ ರಲ್ಲಿ  ಪ್ರಧಾನಿ ಶ್ರೀ ಮೋದೀಜಿಯವರು ಉದ್ಘಾಟಿಸಿದರು. ಈ ಮೂಲಕ ಡಾ. ಅಂಬೇಡ್ಕರ್ ಅವರ ಅಂತ್ಯಸಂಸ್ಕಾರವನ್ನು ದೆಹಲಿಯಲ್ಲಿ ಮಾಡಲು ಅವಕಾಶ ನೀಡದ,  ದೆಹಲಿಯಲ್ಲಿ  ಈ ಸಂವಿಧಾನಶಿಲ್ಪಿಯ ಹೆಸರಲ್ಲಿ ಸ್ಮಾರಕವೇ ಇಲ್ಲದಿದ್ದ ಕೊರತೆಯನ್ನು ಅವರು ಕಾಲವಾಗಿ ಸುಮಾರು ೬೨ ವರ್ಷಗಳಷ್ಟು ಸುಧೀರ್ಘ ಕಾಲದ ಬಳಿಕ ಈ ರೀತಿ ಸರಿಪಡಿಸಲಾಯಿತು 

ಇದಕ್ಕೂ ಒಂದು ವರ್ಷ ಮೊದಲು ನವದೆಹಲಿಯ ಜನಪಥ್ ನ ೧೫ನೇ ನಂಬರ್ ಬಂಗಲೆಯನ್ನು "ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ" ವನ್ನಾಗಿ ಬದಲಾಯಿಸಿ ಅದರಲ್ಲಿ ರಾಜ್ಯಶಾಸ್ತ್ರ, ಕಾನೂನುಶಾಸ್ತ್ರ , ಅರ್ಥಶಾಸ್ತ್ರ, ಬೌದ್ಧಧರ್ಮಶಾಸ್ತ್ರ, ಹೀಗೆ ಡಾ ಅಂಬೇಡ್ಕರ ಅವರ ಆಸಕ್ತಿಯ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಬೃಹತ್ ಸುಸಜ್ಜಿತ ಗ್ರಂಥಾಲಯವನ್ನು ಸ್ಥಾಪಿಸಲಾಯಿತು... 

ಡಾ.ಅಂಬೇಡ್ಕರ್ ಜನಿಸಿದ ಪವಿತ್ರ ಮಣ್ಣು ಮಧ್ಯಪ್ರದೇಶದ ಮಹೌ ನಲ್ಲಿ "ಭೀಮ್ ಜನ್ಮ ಭೂಮಿಯನ್ನು ಮಧ್ಯಪ್ರದೇಶದ ಶಿವಾರಾಜ್ ಪಾಟೀಲ್ ನೇತೃತ್ವದ ಬಿಜೆಪಿ ಸರಕಾರ ೨೦೦೮ರಲ್ಲಿ ಲೋಕಾರ್ಪಣೆಗೊಳಿಸಿತು. ಅಲ್ಲಿಯೇ ಇದ್ದ ಸಮಾಜ ವಿಜ್ಞಾನ ವಿಶ್ವ ವಿದ್ಯಾಲಯವನ್ನು 'ಡಾ. ಭೀಮರಾವ್ ಅಂಬೇಡ್ಕರ್ ಸಮಾಜ ವಿಜ್ಞಾನ ವಿಶ್ವ ವಿದ್ಯಾಲಯ' ಅಂತ ಹೆಸರು ಬದಲಾಯಿಸಿ ಮಹಾತ್ಮ ಅಂಬೇಡ್ಕರ್ ಗೆ ಗೌರವ ಸಲ್ಲಿಸಲಾಯಿತು. 

ಲಂಡನ್ ನಲ್ಲಿ ಡಾ. ಅಂಬೇಡ್ಕರ್ ತಾನು ವಿದ್ಯಾಭ್ಯಾಸ ಮಾಡುತ್ತಿದ್ದಾಗ ವಾಸಿಸುತ್ತಿದ್ದ ಮನೆಯನ್ನು ಮಹಾರಾಷ್ಟ್ರ ಬಿಜೆಪಿ ಸರಕಾರ ಖರೀದಿಸಿ ಅದನ್ನು ಸ್ಮಾರಕವನ್ನಾಗಿ ಮಾರ್ಪಡಿಸಿ ಡಾ.ಅಂಬೇಡ್ಕರ್ ಹೆಸರನ್ನು ಅಜರಾಮರವಾಗಿಸುವ ಕೆಲಸ ಮಾಡಿತು... 

ಇದಲ್ಲದೆ ಡಾ.ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ಪವಿತ್ರ ಕ್ಷೇತ್ರ, ಮಹಾರಾಷ್ಟ್ರದ ದೀಕ್ಷಾ ಭೂಮಿ, ಡಾ. ಅಂಬೇಡ್ಕರ್ ಅವರ ಅಂತ್ಯಸಂಸ್ಕಾರ ನಿರ್ವಹಿಸಿದ ಮುಂಬೈನ  ಚೈತ್ಯ ಭೂಮಿ, ಮುಂಬೈಯ ದಾದರಿನ ಹಿಂದೂ ಕಾಲನಿಯಲ್ಲಿರುವ ಅವರ ನಿವಾಸ 'ರಾಜಗೃಹ', ಪುಣೆಯಲ್ಲಿ ಅವರ ಸ್ಮರಣೆಗೆ ಸ್ಥಾಪಿಸಿದ ಮ್ಯೂಸಿಯಂ ಹೀಗೆ ಎಲ್ಲವನ್ನೂ ನಿರ್ಮಾಣಮಾಡುವ ಕಾರ್ಯ ಭರದಿಂದ ಸಾಗಿದೆ.  ಡಾ.ಅಂಬೇಡ್ಕರ್ ಎಂಬ ಅಪ್ರತಿಮ ವಿದ್ವಾಂಸನ ನೆನಪಿಗಾಗಿ ಆ ಪುಣ್ಯ ಪುರುಷ ಕಾಲವಾಗಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕಳೆದ ಬಳಿಕ ನರೇಂದ್ರ ಮೋದೀಜಿಯವರ ನೇತೃತ್ವದ  ಎನ್.ಡಿ. ಎ  ಸರಕಾರ ಹೀಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. 

ಇವತ್ತು ಆ ಮಹಾಪುರುಷನ ಜನುಮ ಜಯಂತಿಯಂದು ಸ್ವತಂತ್ರ ಭಾರತಕ್ಕೆ ಅವರು ನೀಡಿದ ಕೊಡುಗೆಗಳೆಲ್ಲವನ್ನೂ ನೆನಪಿಸಿಕೊಳ್ಳೋಣ... ಜೊತೆಗೆ ಇವತ್ತೇ  ಸೌರ ಯುಗಾದಿಯ ಸಂಭ್ರಮವನ್ನೂ ಕೋವಿಡ್ ಕಟ್ಟಳೆಗಳನ್ನು ಮೀರದೆ ಆಚರಿಸೋಣ... 

ಎಲ್ಲರಿಗೂ ವಿಷು ಸಂಕ್ರಮಣದ ಶುಭಾಶಯಗಳು ...... ಮತ್ತು ಹೃದಯಾಂತರಾಳದಿಂದ ಒಂದು ಪ್ರೀತಿಯ ಘೋಷಣೆ...."ಜೈ ಭೀಮ್.."

Related posts