Home / Media / Digital News

Digital News

ಈವರೆಗಿನ ನನ್ನ ಹೇಳಿಕೆಗಳು ಮುಸ್ಲಿಮರ ವಿರುದ್ಧ ಅಲ್ಲ...

ಈವರೆಗಿನ ನನ್ನ ಹೇಳಿಕೆಗಳು ಮುಸ್ಲಿಮರ ವಿರುದ್ಧ ಅಲ್ಲ

33 ಕೋಟಿ ದೇವತೆಗಳನ್ನು ಪೂಜಿಸುವವರಿಗೆ ಅಲ್ಲಾ, ಏಸು ಹೆಚ್ಚಲ್ಲ

 

ಬಿ.ಎನ್‌.ಶ್ರೀಧರ

 

ಹುಬ್ಬಳ್ಳಿ: ‘33 ಕೋಟಿ ದೇವತೆಗಳನ್ನು ಪೂಜೆ ಮಾಡುವವರಿಗೆ ಒಬ್ಬ ಅಲ್ಲಾ, ಒಬ್ಬ ಏಸು ಜಾಸ್ತಿ ಆಗಲು ಸಾಧ್ಯವೇ ಇಲ್ಲ...’

ಹೀಗೆ ಹೇಳಿದ್ದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ.

‘ಈವರೆಗಿನ ನನ್ನ ಟೀಕೆ, ವಿಮರ್ಶೆಗಳು ಮುಸ್ಲಿಮರ ವಿರುದ್ಧ ಮಾಡಿದ್ದಲ್ಲ! ಅವರ ಹಿಂದೆ ಇರುವ ದೇಶದ್ರೋಹದ ಮಾನಸಿಕತೆ ವಿರುದ್ಧ ಮಾಡಿದ್ದು. ಮುಸ್ಲಿಮರು ಅದರಿಂದ ಹೊರಬಂದರೆ ಖಂಡಿತ ವಾಗಿಯೂ ಅವರನ್ನು ಒಪ್ಪಿಕೊಳ್ಳಲು ಯಾವ ಅಭ್ಯಂತರವೂ ಇಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

‘ಒಬ್ಬ ಅಲ್ಲಾ ಮತ್ತು ಒಬ್ಬ ಏಸುವನ್ನು ನಮ್ಮ ಮಧ್ಯದಲ್ಲೇ ಕೂರಿಸಿಕೊಂಡು ಪೂಜೆ ಮಾಡುತ್ತೇವೆ. ಆದರೆ, ಅವರು ಕೂಡ ಅದೇ ರೀತಿಯಲ್ಲಿ ತುಂಬಾ ವಿಸ್ತಾರವಾದ ದೃಷ್ಟಿಯಲ್ಲಿ ನಮ್ಮನ್ನು ಸ್ವೀಕಾರ ಮಾಡಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

‘ವಿವಾದಾತ್ಮಕ ಹೇಳಿಕೆ ಅಂದ್ರೆ ನಿಮಗೆ ಇಷ್ಟನಾ’ ಎಂಬ ಪ್ರಶ್ನೆಗೆ ‘ನಾನು ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟಿಲ್ಲ. ಹೇಳಿಕೆಗಳನ್ನು ಸರಿಯಾಗಿ ಗ್ರಹಿಸದ, ಅರ್ಥ ಮಾಡಿಕೊಳ್ಳದ ವೈಚಾರಿಕ ಮೂರ್ಖರಿಗೆ ನನ್ನ ಮಾತುಗಳು ವಿವಾದಾತ್ಮಕವಾಗಿ ಕಾಣಿಸುತ್ತವೆ. ಅಂತಹ ದುರ್ಬಲರ ಕಾರಣಕ್ಕೆ ನನ್ನ ಅಭಿಪ್ರಾಯ, ನಿಲುವುಗಳನ್ನು ಬದಲಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಹೆಗಡೆ, 6ನೇ ಬಾರಿಯೂ ಗೆಲ್ಲುವುದಕ್ಕೆ ತಾಲೀಮು ನಡೆಸಿದ್ದಾರೆ. ದೇಶ ಉಳಿಯಬೇಕಾ ದರೆ ಮೋದಿ ಪ್ರಧಾನಿಯಾಗಬೇಕು ಎಂದು ಭಾವನಾತ್ಮಕ ಹೇಳಿಕೆಗಳ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.

₹72 ಸಾವಿರಕ್ಕೆ ಎಷ್ಟು ಸೊನ್ನೆ ಎಂಬುದು 
ರಾಹುಲ್‌ ಗಾಂಧಿಗೆ ಗೊತ್ತಾ?

‘ನ್ಯಾಯ್‌ ಯೋಜನೆ ಘೋಷಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ₹72 ಸಾವಿರಕ್ಕೆ ಎಷ್ಟು ಸೊನ್ನೆ ಇದೆ ಎಂಬುದು ಗೊತ್ತಾ? ಎಷ್ಟು ಸೊನ್ನೆ ಇದೆ ಎಂದು ರಾಹುಲ್‌ ಗಾಂಧಿಯನ್ನು ಕೇಳಿ. ಅವರು ಸರಿಯಾಗಿ ಹೇಳಿದರೆ ಅದನ್ನು ಒಪ್ಪುತ್ತೇನೆ’ ಎಂದು ಅನಂತ ಕುಮಾರ ಹೆಗಡೆ ಕುಟುಕಿದರು. ಕಾಂಗ್ರೆಸ್‌ನ ಉದ್ದೇಶಿತ ‘ನ್ಯಾಯ್‌’ ಯೋಜನೆ ಬಗ್ಗೆ ಏನು ಹೇಳುವಿರಿ ಎಂಬ ಪ್ರಶ್ನೆಗೆ ಅವರ ಮಾತಿನ ಪ್ರಹಾರ ಮೇಲಿನಂತಿತ್ತು.

ಮಹಾಘಟಬಂಧನ್‌ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ, ‘ಮೇ 23ಕ್ಕೆ (ಚುನಾವಣಾ ಫಲಿತಾಂಶದ ದಿನ) ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ’ ಎಂದರು.

http://epaper.prajavani.net/?pub=pp3-20190403_14&article=1852346690

Related posts