Home / Media / Digital News

Digital News

ಸಿ.ಎಂ ಹುದ್ದೆ ಕನಸು ನನಗಿಲ್ಲ ಕನಸಿನಲ್ಲಿ ನಂಬಿಕೆಯೂ ಇಲ್ಲ...

l ‘ಮುಸ್ಲಿಮರ ವೋಟ್‌ ಬೇಡ’; ‘ಹಿಂದೂ ಹೆಣ್ಣು ಮಕ್ಕಳ ಮೈ ಮುಟ್ಟಿದರೆ ಕೈಕತ್ತರಿಸಿ’, ‘ಸಂವಿಧಾನ ಬದಲಾವಣೆ’.. ಈ ರೀತಿಯ ನಿಮ್ಮ ಹೇಳಿಕೆಗಳು ಎಷ್ಟು ಸರಿ?

ಮುಸ್ಲಿಮರ ಬಗ್ಗೆ ನಾನು ಹಾಗೆ ಹೇಳಿಲ್ಲ. ವೈಚಾರಿಕ ನೆಲೆಗಟ್ಟಿನಲ್ಲಿ ಭಯೋತ್ಪಾದನೆ ಬಗ್ಗೆ ಹೇಳಿದ್ದೇನೆ. ದೇಶದ್ರೋಹಿಗಳ ವೋಟ್‌ ಬೇಡ ಎಂದಿದ್ದೇನೆ; ಹಾಗೆಯೇ ಹಿಂದೂ ಹೆಣ್ಣು ಮಕ್ಕಳ ಕುರಿತ ನನ್ನ ಭಾಷಣವನ್ನು ಒಮ್ಮೆ ಸರಿಯಾಗಿ ಕೇಳಿಸಿಕೊಂಡು, ಬಳಿಕ ಆ ಬಗ್ಗೆ ಚರ್ಚೆ ಮಾಡಲಿ.

l ಹಾಗಾದರೆ ಈ ಹೇಳಿಕೆಗಳ ಅಪ್ಪ– ಅಮ್ಮ ಯಾರು?

ಜನರಲ್ಲಿ ನನ್ನ ಬಗ್ಗೆ ಇರುವ ಅಭಿಪ್ರಾಯ ಬದಲಿಸಬೇಕು; ಅತ್ಯಂತ ಸ್ವಚ್ಛ ನೀರನ್ನು ಕಲುಷಿತಗೊಳಿಸಬೇಕು ಎನ್ನುವ ಪೂರ್ವಗ್ರಹ ಪೀಡಿತ ಮನಸ್ಸುಗಳು ಪದೇ ಪದೇ ಇಂತಹ ವಿಷಯಗಳನ್ನು ಮುನ್ನೆಲೆಗೆ ತಂದು ಅಪಪ್ರಚಾರ ಮಾಡುತ್ತಿವೆ. ಇದರಲ್ಲೇ ಅವರಿಗೆ ಖುಷಿ ಸಿಗುವುದಾದರೆ ಮಾಡಲಿ ಬಿಡಿ.

l ಜನಪ್ರತಿನಿಧಿಯಾಗಿ ಒಂದು ಧರ್ಮವನ್ನು ಓಲೈಸುವ, ಮತ್ತೊಂದನ್ನು ಟೀಕಿಸುವ ನಿಮ್ಮ ನಿಲುವುಗಳು ಎಷ್ಟರಮಟ್ಟಿಗೆ ಸರಿ?

ನಾನು ನನ್ನ ಸೈದ್ಧಾಂತಿಕ ನಿಲುವುಗಳಿಗೆ ಬದ್ಧನಾಗಿದ್ದೇನೆ. ನನಗೆ ವೈಚಾರಿಕ ಬದ್ಧತೆ ಹೇಗಿದೆಯೊ ಹಾಗೆಯೇ ಕರ್ತವ್ಯದ ಜವಾಬ್ದಾರಿಯೂ ಇದೆ. ನನ್ನ ಹೇಳಿಕೆಗಳಲ್ಲಿ ಅಸತ್ಯ ಇಲ್ಲ. ಯಾವುದೋ ರಾಜಕಾರಣಕ್ಕಾಗಿ ಹೇಳಿದ್ದಲ್ಲ. ಅದಕ್ಕೊಂದು ತಾರ್ಕಿಕ ಹಿನ್ನೆಲೆ ಇದೆ. ಅದಕ್ಕಾಗಿಯೇ ಅಚಲನಾಗಿದ್ದೇನೆ.

l ನಿಮ್ಮ ನಿಲುವುಗಳಿಗೆ ನೀವು ಬದ್ಧರಾಗಿದ್ದೀರಾ?

ಖಂಡಿತವಾಗಿಯೂ. ದೇಶ, ಧರ್ಮ, ರಾಷ್ಟ್ರೀ
ಯತೆ, ಸಮಾಜ– ಇವುಗಳ ದೃಷ್ಟಿಯಿಂದ ನಾನು ಹೇಳಿರುವುದಕ್ಕೆ ಬದ್ಧನಾಗಿದ್ದೇನೆ. ನಾನು ನನ್ನ ವೈಚಾರಿಕ ಬದ್ಧತೆಗೆ ಅನುಗುಣವಾಗಿ ಕೊಟ್ಟಿರುವ ಹೇಳಿಕೆ
ಗಳಲ್ಲಿ ಯಾವ ಗೊಂದಲಗಳೂ ಇಲ್ಲ. ಆದರೆ, ಅವು
ಗಳನ್ನು ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಿಸಿ, ಅಪಪ್ರಚಾರ ಮಾಡುತ್ತಿದ್ದಾರೆ.

l ನಿಮ್ಮ ವಿವಾದಾಸ್ಪದ ಹೇಳಿಕೆಗಳ ಕಾರಣಕ್ಕೆ ಕ್ಷೇತ್ರದ ಜನ ಮರುಕಪಟ್ಟಿದ್ದು ಇದೆಯೇ?

ನಮ್ಮ ಜನ ಹೆಮ್ಮೆಪಡುತ್ತಿದ್ದಾರೆ. ನನ್ನ ಸೈದ್ಧಾಂತಿಕ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದು ಮತ್ತಷ್ಟು ದೃಢೀಕರಣಗೊಂಡಿದೆ. ಆಡಳಿತದ ಬದ್ಧತೆ ಬದಲಾಗಿಲ್ಲ. ಹೀಗಾಗಿ 5 ಬಾರಿ ವೋಟ್‌ ಹಾಕಿದ್ದು ಸರಿ ಇದೆ ಎಂದು 6ನೇ ಬಾರಿಗೂ ಬೆಂಬಲಿಸುವ ಉತ್ಸಾಹದಲ್ಲಿದ್ದಾರೆ.

l ಜೆಡಿಎಸ್‌ನ ಆನಂದ ಅಸ್ನೋಟಿಕರ್‌ ಪ್ರಬಲ ಎದುರಾಳಿಯೇ?

ಆ ಬಗ್ಗೆ ನಾನೇನೂ ಹೇಳಲ್ಲ. ಜನರೇ ಸೂಕ್ತ ಉತ್ತರ ನೀಡುತ್ತಾರೆ.

 

l ಕೋಮು ಸಾಮರಸ್ಯ ಕಾಪಾಡಿಕೊಂಡು ರಾಜಕಾರಣ ಮಾಡಲು ನಿಮಗೆ ಏಕೆ ಸಾಧ್ಯವಾಗಲಿಲ್ಲ?

ನಾನು ಯಾವುದೇ ಮಹತ್ವಾಕಾಂಕ್ಷೆ ಇಟ್ಟುಕೊಂಡು ರಾಜಕಾರಣಕ್ಕೆ ಬಂದವನಲ್ಲ. ಮುಂದಿನ ರಾಜಕಾರಣಕ್ಕೆ ನಾನು ಹೀಗೆ ಬದಲಾಗಬೇಕು, ಹಾಗೆ ಬದಲಾಗಬೇಕು, ನನ್ನನ್ನು ಹೀಗೇ ತಿದ್ದಿಕೊಳ್ಳಬೇಕು ಅಂತೇನೂ ಇಲ್ಲ. ಭಗವಂತ ಎಷ್ಟು ಕಾಲ ಈ ಜವಾಬ್ದಾರಿಯನ್ನು ವಹಿಸು
ತ್ತಾನೋ ಅಷ್ಟು ಕಾಲ ಮಾಡುತ್ತೇನೆ. ಆತ್ಮತೃಪ್ತಿ ನನಗೆ ತುಂಬಾ ಮುಖ್ಯ.

l ಎಲ್‌.ಕೆ.ಅಡ್ವಾಣಿ, ಮುರಳಿಮನೋಹರ ಜೋಶಿ, ತೇಜಸ್ವಿನಿ ಅನಂತಕುಮಾರ್ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್‌ ತಪ್ಪಿಸಿದ್ದರ ಬಗ್ಗೆ ಏನಂತೀರಾ?

ಅದರ ಬಗ್ಗೆ ಚರ್ಚೆ ಮಾಡಲ್ಲ; ಎಲ್ಲವೂ ಹಿರಿಯರ ತೀರ್ಮಾನ.

l ರಾಜ್ಯ ರಾಜಕಾರಣದಿಂದ ದೂರ ಇದ್ದೀರಿ ಏಕೆ?

ನನಗೆ ರಾಜ್ಯ 
ರಾಜಕಾರಣದಲ್ಲಿ ಮೊದಲಿನಿಂದಲೂ ರುಚಿ ಇಲ್ಲ.

l ನಿಮಗೆ ಮುಖ್ಯಮಂತ್ರಿ ಆಗುವ ಅವಕಾಶ ಬರುತ್ತಾ?

ಕನಸು ಕಾಣುವ ವ್ಯಕ್ತಿ ನಾನಲ್ಲ; ಕನಸಿನಲ್ಲಿ ನಂಬಿಕೆ ಇಟ್ಟವನೂ ಅಲ್ಲ. ಅಪೇಕ್ಷೆ ಕೂಡ ನನ್ನದಲ್ಲ.

l ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಕರ್ನಾಟಕದಲ್ಲಿ ಯಾವ ಪಕ್ಷದ ಸರ್ಕಾರ ಇರುತ್ತೆ ಅಥವಾ ಬರುತ್ತೆ?

ರಾಜಕೀಯ ವಿಪ್ಲವಗಳು ನಡೆಯುವ ಎಲ್ಲ ಸಾಧ್ಯತೆ ಇದೆ. ಜನ ಪ್ರಾಮಾಣಿಕ, ಪ್ರಬುದ್ಧ ಸರ್ಕಾರದ ನಿರೀಕ್ಷೆಯಲ್ಲಿದ್ದಾರೆ. ಮೋದಿಯವರ ಪುನರಾಗಮನ ಎಲ್ಲ ಬದಲಾವಣೆಗಳಿಗೆ ನಾಂದಿಯಾಡಲಿದೆ.

l ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ನಿಮ್ಮ ನಡುವೆ ಮುಸುಕಿನ ಗುದ್ದಾಟ ಇದೆ ಅಂತಾರಲ್ಲ?

ಹಾಗೇನೂ ಇಲ್ಲ. ಚೆನ್ನಾಗಿಯೇ ಇದ್ದೇವೆ.

ಇವರ ಬಗ್ಗೆ ನಿಮ್ಮ ಅಭಿಪ್ರಾಯ...

l ಎಚ್‌.ಡಿ.ದೇವೇಗೌಡ: ಅತ್ಯಂತ ಮುತ್ಸದ್ದಿ

l ಸೋನಿಯಾ ಗಾಂಧಿ: ಅತ್ಯಂತ ಅಪ್ರಬುದ್ಧೆ

l ರಾಹುಲ್‌ ಗಾಂಧಿ: ಬಾಲಿಶ

l ಅಮಿತ್‌ ಶಾ: ಅತ್ಯಂತ ಪ್ರಬುದ್ಧ, ಕರಾರುವಾಕ್ಕು, ಚಾಣಾಕ್ಷ

l ಮಲ್ಲಿಕಾರ್ಜುನ ಖರ್ಗೆ: ಹಿರಿಯರ ಜತೆ ಸಂವಾದ ಮಾಡುವಾಗ ಸಿಗುವ ಎಲ್ಲ 
ಅನುಭವ ಸಿಗುತ್ತದೆ

l ಸಿದ್ದರಾಮಯ್ಯ: ಮೂರ್ಖನ ಜತೆ ಚರ್ಚೆ ಮಾಡುವಾಗ ಏನೆಲ್ಲ ಅನುಭವಗಳು ಆಗುತ್ತವೊ ಅವೆಲ್ಲವೂ ಆಗುತ್ತವೆ

l ಎಚ್‌.ಡಿ.ಕುಮಾರಸ್ವಾಮಿ: ಪಾಪ, 
ಸಾಂದರ್ಭಿಕ ಶಿಶು

l ಎಚ್‌.ಡಿ.ರೇವಣ್ಣ: ನಿಂಬೆಹಣ್ಣು

l ನೀವು ಬಿಜೆಪಿಯ ಫೈರ್‌ ಬ್ರ್ಯಾಂಡ್‌. ಆದರೆ, ತಾರಾ ಪ್ರಚಾರಕರ ಪಟ್ಟಿಯಲ್ಲಿ ನಿಮ್ಮ ಹೆಸರೇ ಇಲ್ಲ. ಅದ್ಹೇಗೆ?

ಲಕ್ಷ್ಮಣ ರೇಖೆಯನ್ನು ಎಳೆದುಕೊಂಡು ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದೇನೆ. ರಾಜ್ಯದ ತುಂಬ ಓಡಾಡಬೇಕು, ಬಹಳ ದೊಡ್ಡ ಲೀಡರ್‌ ಆಗಬೇಕು ಎನ್ನುವ ಮಹತ್ವಾಕಾಂಕ್ಷೆ ನನಗಿಲ್ಲ. ನನ್ನ ಕ್ಷೇತ್ರದ ಜನತೆ ನನ್ನನ್ನು ಪ್ರೀತಿಸುತ್ತಿದ್ದಾರೆ. ಪಕ್ಷ ಜವಾಬ್ದಾರಿ ಕೊಟ್ಟಿದೆ. ಇಷ್ಟು ಸಾಕು ನನಗೆ.


http://epaper.prajavani.net/?pub=pp3-20190403_14&article=781678677

Related posts

Last, but not least!